ಚಾಮರಾಜನಗರ ಜಿಲ್ಲಾದ್ಯಂತ ಭಾರೀ ಗಾಳಿ ಮಳೆ; ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಿವಿದೆಡೆಗಳಿಗೆ ಸೋಮವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮನೆಗಳ ಮೇಲ್ಚಾವಣಿ, ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ಮೇಲುಕಾಮನಹಳ್ಳಿ, ಹಂಗಳ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಗೋಪಾಲಪುರ, ತೆರಕಣಾಂಬಿ ಹೋಬಳಿಯ ವಡ್ಡಗೆರೆ, ದೇಪಾಪುರ, ಶೀಲವಂತಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೋರು ಗಾಳಿಗೆ ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ. ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿವೆ. ಜಮೀನುಗಳಲ್ಲಿ ಬೆಳೆದಿದ್ದ ಬಾಳೆಯ ಫಸಲುಗಳು ನೆಲಕಚ್ಚಿವೆ.
ಊಟಿ ರಸ್ತೆಯ ಹಂಗಳ ಗ್ರಾಮದಲ್ಲಿ ಹಳೆಯ ಮರವೊಂದು ನೆಲಕ್ಕುರುಳಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು. ತೆರಕಣಾಂಬಿ ದೇಪಾಪುರ ರಸ್ತೆಯ ಬದಿಯಲ್ಲಿದ್ದ ಮರಗಳು ನೆಲಕ್ಕುರುಳಿ ಬೆಳಗಿನವರೆಗೂ ಸಂಚಾರ ಸ್ಥಗಿತವಾಗಿತ್ತು. ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಮರಗಳ ಕೊಂಬೆಗಳನ್ನು ಕತ್ತರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಚಾಮರಾಜನಗರ ಹಾಗೂ ತಾಲೂಕಿನ ವ್ಯಾಪ್ತಿಯ ಕಿಲಗೆರೆ ಗ್ರಾಮದಲ್ಲಿ ಸುಮಾರು 205 ಎಕರೆ ವಿಸ್ತೀರ್ಣದ ಬಾಳೆ, 57ಎಕರೆ ವಿಸ್ತೀರ್ಣದ ಕಬ್ಬು, 150ಕ್ಕು ಹೆಚ್ಚಿನ ತೆಂಗಿನ ಮರಗಳು ನೆಲಕಚ್ಚಿದ್ದರೆ 5 ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ.
ಗೋಪಾಲಪುರ, ಹೊನ್ನೇಗೌಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಸುಮಾರು ಇನ್ನೂರು ಎಕರೆಗೂ ಹೆಚ್ಚಿನ ಬಾಳೆ ಬೆಳೆ ನೆಲಕಚ್ಚಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ತೀವ್ರ ಬರಸಂದರ್ಭದಲ್ಲಿ ರೈತರ ಜೀವನೋಪಾಯಕ್ಕೆ ಮಾರ್ಗವಾಗಿದ್ದ ಕಟಾವುಹಂತದಲ್ಲಿದ್ದ ಬಾಳೆಬೆಳೆ ನೆಲಕಚ್ಚಿರುವುದರಿಂದ ರೈತಾಪಿವರ್ಗ ದಿಕ್ಕೆಟ್ಟಿದ್ದು ಸರ್ಕಾರ ಮಾನವೀಯತೆ ದೃಷ್ಟಿಯಿಂದ ಹೆಚ್ಚಿನ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಯುವಮುಖಂಡ ಗೋಪಾಲಪುರ ಲೋಕೇಶ್ ಒತ್ತಾಯಿಸಿದ್ದಾರೆ.