ಸರಕು ಸಾಗಣಾ ವಾಹನಗಳಲ್ಲಿ ಶಾಲಾ ಮಕ್ಕಳ ಪ್ರಯಾಣ ತಡೆಗಟ್ಟಲು ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚನೆ
ಬೆಂಗಳೂರು, ಎ. 30: ರಾಜ್ಯದ ವಿವಿಧೆಡೆಗಳಲ್ಲಿ ಸರಕು ಸಾಗಣಾ ವಾಹನಗಳಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರನ್ನು ಕಾನೂನು ಬಾಹಿರವಾಗಿ, ಅಪಾಯಕಾರಿ ರೀತಿಯಲ್ಲಿ ಕರೆದೊಯ್ಯುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದ ಹೈಕೋರ್ಟಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದ ಮೂಲಕ ವಿಸ್ತೃತ ಸಭೆ ನಡೆಸಿದ ಬಳಿಕ ಮಾತನಾಡಿದರು. ರಾಜ್ಯದ ಎಲ್ಲ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳು ನಿಯಮ ಬಾಹಿರ ಮತ್ತು ಅಪಾಯಕಾರಿ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.
ಆ ನಿಟ್ಟಿನಲ್ಲಿ ಮೇ 20ರೊಳಗೆ ಪ್ರತ್ಯೇಕವಾದ ಕ್ರಿಯಾ ಯೋಜನೆಗಳನ್ನು ರೂಪಿಸಿ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಹಾಗೂ ಸಂಬಂಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಯಾವ ಭಾಗದಲ್ಲಿ, ಯಾವ ಕ್ಷೇತ್ರದಲ್ಲಿ ಅಥವಾ ಯಾವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯದ ಕೊರತೆ ಇದೆ ಎಂಬುದನ್ನು ಜಿಲ್ಲಾ ಸಾರಿಗೆ ಪ್ರಾಧಿಕಾರಿಗಳು ತಮ್ಮ ಇತರೆ ಸಂಬಂಧಿಸಿದ ಇಲಾಖಾ ಸಿಬ್ಬಂದಿ ಮೂಲಕ ಗುರುತಿಸಿ, ಅಂತಹ ಭಾಗದಲ್ಲಿ, ಕ್ಷೇತ್ರದಲ್ಲಿ ಅಥವಾ ಪ್ರದೇಶದಲ್ಲಿ ಸೂಕ್ತ ಮತ್ತು ಸುರಕ್ಷಿತವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಬೇಡಿಕೆ ಸಲ್ಲಿಸುಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.
ಜಿಲ್ಲೆಯ ಯಾವ ಪ್ರದೇಶದಲ್ಲಿ ಸಿದ್ಧ ಉಡುಪು ಕಾರ್ಮಿಕರು ಹೆಚ್ಚಾಗಿರುತ್ತಾರೋ ಅಂತಹ ಪ್ರದೇಶಗಳಲ್ಲಿ ಅವರ ಸುರಕ್ಷಿತ ಮತ್ತು ಕೈಗೆಟುಕುವಂತಹ ಸಾಗಾಣಿಕೆಗಾಗಿ ಕಾರ್ಮಿಕ ಇಲಾಖೆಯ ಸಂಯೋಜನೆಯೊಂದಿಗೆ ವಿಶೇಷ ಯೋಜನೆಗಳನ್ನು ರೂಪಿಸುವತ್ತ ಕ್ರಮ ವಹಿಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಿದರು.
ಅಲ್ಲದೆ, ಕಾರ್ಮಿಕರ ಸುರಕ್ಷತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಾರಿಗೆ, ಕಾರ್ಮಿಕ, ಶಿಕ್ಷಣ, ಒಳಾಡಳಿತ ಇಲಾಖೆಗಳು, ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿಗಳ ಸಹಭಾಗಿತ್ವದೊಂದಿಗೆ ಯೋಜನೆಯನ್ನು ರೂಪಿಸುವಂತೆ ಸಲಹೆ ನೀಡಿದರು.
ಕೆಎಸ್ಸಾರ್ಟಿಸಿ, ಬಿಎಂಟಿಸಿಗೆ ಸೇರಿದ ಎಲ್ಲ ಸಾರಿಗೆ ವಾಹನಗಳ ಹಿಂಬದಿಯಲ್ಲಿ ಸರಕು ಸಾಗಣಾ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರ ಎಂಬ ಸಂದೇಶ ಹೊತ್ತ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದ ಅವರು, ರಾಜ್ಯದ ಎಲ್ಲ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು 15 ದಿನಗಳಿಗೊಮ್ಮೆ ಉಸ್ತುವಾರಿ ಸಭೆಗಳನ್ನು ನಡೆಸಿ ಅದರ ವರದಿಗಳನ್ನು ಪ್ರತಿ ತಿಂಗಳು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಹಾಗೂ ಸಂಬಂಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ಸಲ್ಲಿಸುವಂತೆ ಕ್ರಮ ವಹಿಸಲು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಪಾಲಿಕೆ ಸಿಬ್ಬಂದಿ, ವಿಶೇಷವಾಗಿ ಪೌರ ಕಾರ್ಮಿಕರು, ಪ್ರಯಾಣಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಬಿಬಿಎಂಪಿ ಪ್ರತ್ಯೇಕವಾದ ಕ್ರಿಯಾ ಯೋಜನೆಯನ್ನು ರೂಪಿಸಿ ಹೈಕೋರ್ಟ್‌ಗೆ ಸಲ್ಲಿಸುವತ್ತ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಆದೇಶಿಸಿದರು.
‘ಸರಕು ಸಾಗಾಣೆ ವಾಹನಗಳಲ್ಲಿ ಶಾಲಾಮಕ್ಕಳು, ಕಾರ್ಮಿಕರನ್ನು ಕರೆದೊಯ್ಯುವುದು ಕಂಡುಬಂದಲ್ಲಿ, ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸುವ ಜೊತೆಗೆ ವಾಹನದ ನೋಂದಣಿ ಪತ್ರ, ಪರವಾನಗಿ ರದ್ದುಪಡಿಸಲು ಕ್ರಮ ವಹಿಸುವುದು. ಅಲ್ಲದೆ, ವಾಹನಗಳ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಸೂಚನೆ’
-ಟಿ.ಎಂ.ವಿಜಯ್ ಭಾಸ್ಕರ್, ಸರಕಾರದ ಮುಖ್ಯ ಕಾರ್ಯದರ್ಶಿ