ರಾಜ್ಯ ಸರಕಾರಕ್ಕೆ ಯಾವುದೇ ಅಪಾಯವಿಲ್ಲ: ಸತೀಶ್ ಜಾರಕಿಹೊಳಿ

Update: 2019-04-30 17:45 GMT

ಬೆಂಗಳೂರು, ಎ.30: ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಮೊದಲ ದಿನದಿಂದಲೂ ಪ್ರಯತ್ನಗಳು ನಡೆಯುತ್ತಲೇ ಇವೆ. ಇವೆಲ್ಲ ಸಂಗತಿಗಳನ್ನು ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಇಬ್ಬರು, ಮೂವರು ಶಾಸಕರು ರಾಜೀನಾಮೆ ನೀಡಿದರೆ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಸರಕಾರ ಅಸ್ಥಿರಗೊಳಿಸಲು ಹೆಚ್ಚಿನ ಸಂಖ್ಯೆಯ ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ ಎಂದರು.

ರಮೇಶ್ ಜೊತೆ ಈಗ ಹೆಚ್ಚಿನ ಶಾಸಕರಿಲ್ಲ. ಅವರು ಏಕಾಂಗಿಯಾಗಿದ್ದಾರೆ. ಈವರೆಗೆ ನಡೆದಿರುವ ಬೆಳವಣಿಗೆಗಳು ಏನೇ ಇರಲಿ, ಇನ್ನು ಮುಂದಾದರೂ ಅವರು ಪಕ್ಷದ ಪರವಾಗಿ ಕೆಲಸ ಮಾಡಲಿ. ಈ ಎಲ್ಲ ಬೆಳವಣಿಗೆಗಳಿಗೆ ರಮೇಶ್ ಅವರ ಅಳಿಯ ಅಂಬಿರಾಯ ಪಾಟೀಲ್ ಕಾರಣ ಎಂದು ಅವರು ಹೇಳಿದರು. ಡಿ.ಕೆ.ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ಸಿದ್ದರಾಮಯ್ಯ ಹೀಗೆ ಸಂದರ್ಭಕ್ಕೆ ತಕ್ಕಂತೆ ಒಬ್ಬೊಬ್ಬರ ಮೇಲೆ ಸಂದರ್ಭಕ್ಕೆ ತಕ್ಕಂತೆ ರಮೇಶ್ ಆರೋಪಗಳನ್ನು ಮಾಡುತ್ತಾರೆ. ಈಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಸರಕಾರದ ವಿರುದ್ಧ ಬಂಡಾಯ ಏಳುವಂತೆ ಪ್ರಚೋದಿಸಿದ್ದೆ ಸತೀಶ್ ಎಂದು ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ಪಕ್ಷದ ಸಂಘಟನೆ, ಸಂಪುಟ ಸಭೆಗೆ ಹೋಗದಂತೆ ಆತನನ್ನು ತಡೆಯಲಿಲ್ಲ. ಅಷ್ಟಕ್ಕೂ ಆತ ಚಿಕ್ಕ ಹುಡುಗ ಅಲ್ಲ. ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಆಲೋಚನೆ ಮಾಡುವ ಸಾಮರ್ಥ್ಯ ಆತನಿಗಿದೆ ಎಂದರು.

ಒಂದು ಪಕ್ಷದಲ್ಲಿ ಇದ್ದುಕೊಂಡು, ಸಚಿವರಾಗಿ ಸರಕಾರದ ವಿರುದ್ಧ ಕೆಲಸ ಮಾಡಿದ ಕಾರಣಕ್ಕಾಗಿ, ಪಕ್ಷದ ನಾಯಕರು ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಾರೆ. ಆತ ಮಾಡಿರುವ ತಪ್ಪಿಗೆ ನಾನು ಹೇಗೆ ಕಾರಣವಾಗಲು ಸಾಧ್ಯ ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.

ಡಿಕೆಶಿ ಬಗ್ಗೆ ಮಾತನಾಡಿಲ್ಲ: ನಾನು ಈವರೆಗೆ ಎಲ್ಲಿಯೂ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಿಲ್ಲ. ಅವರು ಕುಂದಗೋಳ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳುವ ವಿಚಾರದಲ್ಲಿ ನಾನು ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಅವರು ಹೇಳಿದರು.

ಈ ಹಿಂದೆ ಗುಂಡ್ಲುಪೇಟೆ, ಬಳ್ಳಾರಿ ಚುನಾವಣೆಯಲ್ಲಿ ಅವರ ಉಸ್ತುವಾರಿಯಲ್ಲೆ ನಾವು ಕೆಲಸ ಮಾಡಿದ್ದೇವೆ. ‘ಸತೀಶ್ ಜಾರಕಿಹೊಳಿ ಸಾಹುಕಾರರು, ನಾನು ಸಾಮಾನ್ಯ ಪ್ರಜೆ’ ಎಂದು ತರಾತುರಿಯಲ್ಲಿ ಶಿವಕುಮಾರ್ ಯಾಕೆ ಹೇಳಿಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಯಾರ ಬಗ್ಗೆಯಾದರೂ ಹೇಳಿಕೆ ನೀಡುವ ಮುನ್ನ, ಮೊದಲು ವಿಷಯ ತಿಳಿದುಕೊಂಡು ನಂತರ ಮಾತನಾಡಲಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News