ಎಸ್ಸೆಸ್ಸೆಲ್ಸಿ: ತುಮಕೂರು ಜಿಲ್ಲೆಗೆ 80.21 ಫಲಿತಾಂಶ
ತುಮಕೂರು.ಎ.30: ಜಿಲ್ಲೆಯ 46 ಶಾಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದು, 24 ಸರಕಾರಿ ಶಾಲೆಗಳು,2 ಅನುದಾನಿತ ಶಾಲೆಗಳು ಹಾಗೂ 20 ಖಾಸಗಿ ಶಾಲೆಗಳು ಶೇ 100ರಷ್ಟು ಫಲಿತಾಂಶವನ್ನು ಸಾಧಿಸಿವೆ ಎಂದು ಡಿಡಿಪಿಐ ಎಂ.ಆರ್.ಕಾಮಾಕ್ಷಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದ್ದಲ್ಲಿ ಈ ಬಾರಿ ಫಲಿತಾಂಶದಲ್ಲಿ ಜಿಲ್ಲೆ 18ನೇ ಸ್ಥಾನಕ್ಕೆ ಕುಸಿದಿದೆ.ಆದರೆ ರಾಜ್ಯ ಫಲಿತಾಂಶವನ್ನು ಗಮನಿಸಿದರೆ ಉತ್ತಮ ಫಲಿತಾಂಶವನ್ನು ಜಿಲ್ಲೆ ಸಾಧಿಸಿದೆ. ಜಿಲ್ಲೆ ಉತ್ತಮ ಫಲಿತಾಂಶವನ್ನು ಸಾಧಿಸಬೇಕಾದರೆ ಶಿಕ್ಷಕರು ಹಾಗೂ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನ್ಮೂಖವಾಗಬೇಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 21,126 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು. 16,947 ವಿದ್ಯಾರ್ಥಿಗಳು ಉತೀರ್ಣರಾಗುವ ಮೂಲಕ ಶೇ80.21ರಷ್ಟು ಮಕ್ಕಳು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇ7ರಷ್ಟು ಹೆಚ್ಚು ಫಲಿತಾಂಶ ಜಿಲ್ಲೆಗೆ ಬಂದಿದೆ ಎಂದರು.ಉತ್ತೀರ್ಣರಾದವರಲ್ಲಿ ಹೆಣ್ಣು ಮಕ್ಕಳು ಮೈಲುಗೈ ಸಾಧಿಸಿದ್ದು, ಶೇ.83.84 ವಿದ್ಯಾರ್ಥಿನಿಯರು ಉತೀರ್ಣರಾಗಿದ್ದರೆ, ಶೇ.77.47ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.625 ಅಂಕಕ್ಕೆ 624 ಅಂಕಗಳನ್ನು ಪಡೆದಿರುವ ಸಿದ್ದಗಂಗಾ ಇಂಗ್ಲಿಷ್ ಶಾಲೆಯ ಸಿ.ಹರ್ಷಿತ್ ಜಿಲ್ಲೆಗೆ ಮೊದಲಿಗರಾಗಿದ್ದು,622 ಅಂಕಗಳನ್ನು ಪಡೆದ ಚಿ.ನಾ.ಹಳ್ಳಿಯ ರೋಟರಿ ಶಾಲೆ ಶರದಿ.ಜಿ.ಎಂ. ಪಡೆದಿದ್ದಾರೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ಒಂದು ತಿಂಗಳಲ್ಲಿ ಮತ್ತೊಂದು ಪೂರಕ ಪರೀಕ್ಷೆ ನಡೆಯಲಿದ್ದು, ಇಲಾಖೆವತಿಯಿಂದಲ್ಲೇ ವಿಶೇಷ ತರಗತಿ ಮಾಡಲಾಗುವುದು. ಅದರಲ್ಲಿ ಭಾಗವಹಿಸಿ, ಹೆಚ್ಚಿನ ಅಂಕ ಪಡೆಯುವಂತೆ ಡಿಡಿಪಿಐ ಎಂ.ಆರ್.ಕಾಮಾಕ್ಷಿ ಸಲಹೆ ನೀಡಿದರು.