ದಾವಣಗೆರೆ: ವಿಶ್ವ ಕಾರ್ಮಿಕ ದಿನಾಚರಣೆ
ದಾವಣಗೆರೆ: ಪ್ರತಿಯೊಬ್ಬ ಕಾರ್ಮಿಕರು ಸರ್ಕಾರದ ಯೋಜನೆಗಳ ಅರಿವು ಹೊಂದಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಜಿ ಕುಲಕರ್ಣಿ ತಿಳಿಸಿದರು.
ನಗರದ ಹಳೇ ನ್ಯಾಯಾಲಯಗಳ ಆವರಣದಲ್ಲಿರುವ ಎಡಿಆರ್ ಕಟ್ಟಡದಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್, ಕರ್ನಾಟಕ ಗಾರ್ಮೆಂಟ್ಸ್ ವರ್ಕಸ್ಸ್ ಯೂನಿಯನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ಏರ್ಪಡಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ತಮ್ಮ ಪರವಾಗಿರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಧರ್ಮ, ಜಾತಿ, ವರ್ಗ, ಭಾಷೆ, ಗಡಿಗಳನ್ನ ದಾಟಿ ಪ್ರಪಂಚದಾದ್ಯಂತ ಎಲ್ಲಾ ಕಾರ್ಮಿಕರು ಇಂದು ಈ ದಿನವನ್ನು ಆಚರಿಸುತ್ತಿದ್ದಾರೆ. ಒಗ್ಗಟ್ಟಾಗಿ ತಮ್ಮ ಹೋರಾಟಕ್ಕೆ ಹುತಾತ್ಮರಾದವರನ್ನು ಸ್ಮರಿಸುವುದರ ಜೊತೆಗೆ ಹಕ್ಕುಗಳ ಪರವಾಗಿ ಹೋರಾಟ ಮಾಡಲು ಸ್ಪೂರ್ತಿಯಾದವರನ್ನು ನೆನೆಯುವ ದಿನ ಇದು. ಕಾರ್ಮಿಕರಿಗೆ ಯಾವುದೇ ರೀತಿಯ ಕಾನೂನಿನ ತೊಡಕುಗಳು ಅಥವಾ ಇಲಾಖೆಯಲ್ಲಿ ತೊಂದರೆಗಳು ಕಂಡುಬಂದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ. ಅದರೊಂದಿಗೆ ಸಲಹೆ ಹಾಗೂ ಪರಿಹಾರ ಪಡೆಯಬಹುದಾಗಿದೆ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪ ಮಾತನಾಡಿ, ದೇಶದಲ್ಲಿ ಇಂದು ಅಸಂಘಟಿತ ಕಾರ್ಮಿಕರ ಸಂಖ್ಯೆ ಬಹಳಷ್ಟಿದೆ. ಅವರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು. ಸಹಾಯಕ ಕಾರ್ಮಿಕ ಆಯುಕ್ತ ಮಹಮದ್ ಜಹೀರ್ ಬಾಷಾ ಮಾತನಾಡಿ, ಬಡತನ ಮತ್ತು ಅನಕ್ಷರತೆಯಿಂದ ಕಾರ್ಮಿಕರು ತಮ್ಮ ಪರವಾದ ಯೋಜನೆಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಕಾರ್ಮಿಕ ಇಲಾಖೆ ಕಾರ್ಮಿಕರ ಹಿತ ಕಾಯುವಲ್ಲಿ ಕಟಿಬದ್ದವಾಗಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ಮೇ. 1 1986 ರಂದು ಕಾರ್ಮಿಕ ಹೋರಾಟದಲ್ಲಿ ಹುತಾತ್ಮರಾದ ನೆನಪಿಗಾಗಿ ಮೇ 1 ರಂದು ಕಾರ್ಮಿಕ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ಪ್ರಪಂಚದ ಎಲ್ಲಾ ದುಡಿಯುವ ವರ್ಗ ಐಕ್ಯತೆಯಿಂದ ಹೋರಾಟದಲ್ಲಿ ಮುನ್ನುಗ್ಗಬೇಕು. ಇಂದು ದೇಶದಲ್ಲಿ ಶೇ. 9 ರಷ್ಟು ದುಡಿಯುವ ವರ್ಗದ ಶ್ರಮವನ್ನು ಶೇ. 10 ರಷ್ಟು ಜನ ಪಡೆಯುತ್ತಿದ್ದಾರೆ. ಬಂಡವಾಳ ಶಾಹಿಗಳು ದುಡಿಯುವ ವರ್ಗದ ಲಾಭ ಪಡೆಯುತ್ತಿದ್ದಾರೆ ಇದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಮಹಮದ್ ಜಹೀರ್ ಭಾಷ, ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ಕರಿಬಸಪ್ಪ ಎಂ, ಜಬೀನಾಖಾನಂ, ಅನ್ವರ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.