ಶರಾವತಿ ಹಿನ್ನೀರಿನಲ್ಲಿ ಬೆಂಗಳೂರಿನ ತಂದೆ - ಮಗಳ ಮೃತದೇಹ ಪತ್ತೆ
ಶಿವಮೊಗ್ಗ, ಮೇ 1: ಜಿಲ್ಲೆಯ ಸಾಗರ ತಾಲೂಕಿನ ತಳಕಳಲೆ ಹಿನ್ನೀರು ಪ್ರದೇಶದಲ್ಲಿ ಬೆಂಗಳೂರು ಮೂಲದ ತಂದೆ ಹಾಗೂ ಮಗಳ ಮೃತದೇಹ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಇದು ಆತ್ಮಹತ್ಯೆಯೋ? ಕೊಲೆಯೋ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಬೆಂಗಳೂರು ಬೊಮ್ಮಸಂದ್ರದ ಎಸ್. ಗಾರ್ಡನ್ ಏರಿಯಾದ ನಿವಾಸಿ ಕೆ.ಎಂ.ಪ್ರಸಾದ್ (32) ಹಾಗೂ ಅವರ ಮಗಳು ಆದಿತಿ (6) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಎ. 26 ರಂದು ತಳಕಳಲೆ ಹಿನ್ನೀರು ಪ್ರದೇಶದ ಬಳಿ ಇನ್ನೋವಾ ಕಾರು ಕಾಣಿಸಿಕೊಂಡಿತ್ತು. ಹಾಗೆಯೇ ಮೃತದೇಹ ಕೂಡ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ನಂತರ ಎ. 29 ರಂದು ಅವರ ಪುತ್ರಿ ಆದಿತಿಯವರ ಶವ ಪತ್ತೆಯಾಗಿತ್ತು.
ನಾಪತ್ತೆಯಾಗಿದ್ದರು: ಕೆ.ಎಂ.ಪ್ರಸಾದ್, ಅವರ ಪತ್ನಿ ರಶ್ಮಿ, ಮಕ್ಕಳಾದ ಆದಿತಿ ಹಾಗೂ ತನ್ಮಯ್‍ರವರು ಫೆ. 7 ರಂದು ಕಣ್ಮರೆಯಾಗಿದ್ದರು. ಈ ಕುರಿತಂತೆ ಬೆಂಗಳೂರಿನ ಹೆಬ್ಬೋಡಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಕೆ.ಎಂ.ಪ್ರಸಾದ್‍ರವರು ಉದ್ಯಮಿಯಾಗಿದ್ದು, ವ್ಯವಹಾರದಲ್ಲಿ ಅಪಾರ ನಷ್ಟ ಅನುಭವಿಸಿದ್ದರು. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಪ್ರಕರಣದ ಕುರಿತಂತೆ ಸಾಕಷ್ಟು ನಿಗೂಢತೆ ಮನೆ ಮಾಡಿದೆ. ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ಹೊರಬರಬೇಕಾಗಿದೆ.