ಶಿವಮೊಗ್ಗ ಜಿಲ್ಲೆಯಲ್ಲಿ ಮಿತಿಮೀರಿರುವ ಮರಳು ಮಾಫಿಯಾ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್
ಶಿವಮೊಗ್ಗ, ಮೇ 1: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಿತಿಮೀರಿದೆ. ನೀತಿ ಮರಳು ಮಾಫಿಯಾ ಮಿತಿಮೀರಿದ್ದು, ತಕ್ಷಣವೇ ಹತೋಟಿಗೆ ತರಬೇಕೆಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಾವಿರಾರು ಮರಳು ಲಾರಿಗಳು ಕಾನೂನುಬಾಹಿರವಾಗಿ ಮರಳು ಸಾಗಾಣೆ ಮಾಡುತ್ತಿವೆ. ನೂರಾರು ಕೋಟಿ ರೂ. ಮೌಲ್ಯದ ವಂಚನೆಯಿದಾಗಿದೆ. ಈ ಮರಳು ಮಾಫಿಯಾ ಜಾಲದೊಳಗೆ ಅಧಿಕಾರಿಗಳು, ರಾಜಕಾರಣಿಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಶಾಮೀಲಾಗಿವೆ ಎಂದು ದೂರಿದರು.
ವಿಶೇಷವಾಗಿ ಸಾಗರ ಮತ್ತು ಹೊಸನಗರ ಭಾಗದಲ್ಲಿ ಈ ಮರಳು ಮಾಫಿಯಾ ಅತಿ ಹೆಚ್ಚಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಮರಳು ಇಲ್ಲದೇ ಕಟ್ಟಡ ಕೆಲಸಗಳೇ ನಿಂತುಹೋಗಿವೆ. ಕೆಲಸಗಾರರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಮರಳು ಇಲ್ಲದಿದ್ದರೆ ಇದರ ಜೊತೆಗೆ ಇನ್ನಿತರ ಕುಶಲಕರ್ಮಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದಾರೆ. ಜೊತೆಗೆ ಅವರ ಅವಲಂಬಿತ ಕುಟುಂಬಗಳಿವೆ. ಅವರ ಬದುಕು ಈಗ ದುಸ್ತರವಾಗಿದೆ ಎಂದರು.
ಶರಾವತಿ ಹಿನ್ನೀರಿನಲ್ಲಿ ಒಂದು ಮರಳಿನ ಕ್ವಾರೆಯನ್ನು ಹರಾಜು ಮಾಡಲಾಗಿದೆ. ಹರಾಜು ಮಾಡಿದ್ದು 1.8 ಕಿಮೀ. ವಿಸ್ತೀರ್ಣವಾಗಿದೆ. ಆದರೆ ಹರಾಜುದಾರ 9 ಕಿ.ಮೀ.ಗೆ ವಿಸ್ತರಿಸಿದ್ದಾನೆ. ಜೆಸಿಬಿ, ಇಟಾಚಿ ಬಳಸುವಂತಿಲ್ಲ ಎಂದರೂ ಕೂಡ 5 ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿದ್ದಾನೆ.
ಪೊಲೀಸ್, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಹೀಗೆ ಎಲ್ಲರು ಶಾಮೀಲಾಗಿದ್ದಾರೆ. ಸಾವಿರಾರು ಲಾರಿಯ ಮರಳನ್ನು ಸ್ಟಾಕ್ ಮಾಡಲಾಗಿದೆ. ಆದರೆ ಈ ಸ್ಟಾಕ್ ಯಾರ್ಡ್‍ಗೆ ಅನುಮತಿಯನ್ನೇ ನೀಡಿಲ್ಲ. ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಒಟ್ಟಾರೆ ಮರಳು ಮಾಫಿಯಾ ಮಿತಿಮೀರಿ ಮಲೆನಾಡಿನಲ್ಲಿ ಬೆಳೆಯುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಗೋಷ್ಟಿಯಲ್ಲಿ ಪ್ರಮುಖರಾದ ಮಧುಸೂದನ್, ರತ್ನಾಕರ ಶೆಣೈ, ಅಣ್ಣಪ್ಪ, ಹಿರಣ್ಣಯ್ಯ ಸೇರಿದಂತೆ ಮೊದಲಾದವರಿದ್ದರು.