ದೇಶದ ಆರ್ಥಿಕ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಹೆಚ್ಚು: ಎನ್.ಆರ್. ಚೆನ್ನಕೇಶವ

Update: 2019-05-01 14:28 GMT

ಹಾಸನ : ಭಾರತ ದೇಶವು ಆರ್ಥಿಕವಾಗಿ ಮುಂದೆ ಬರಬೇಕಾದರೇ ಕಾರ್ಮಿಕರ ಕೊಡುಗೆ ಅಪಾರ. ಕಾರ್ಮಿಕರಿಲ್ಲದೆ ಪ್ರಜೆಯು ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ಆರ್. ಚೆನ್ನಕೇಶವ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಪ್ರಾದೇಶಿಕ ಸಾರಿಗೆ ಕಚೇರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ, ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಇವರುಗಳ ಸಂಯುಕ್ತಾಶಯದಲ್ಲಿ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಲ್ಲಿ ಉಂಟಾಗುವ ಕಾನೂನು ತೊಡಕುಗಳ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ದುಡಿಸಿಕೊಳ್ಳುವುದರ ವಿರುದ್ಧ ದೊಡ್ಡ ಸಮಾಜವಾದಿಗಳು ಒಂದು ಆಂದೋಲನ ಕೈಗೊಂಡರು. ಕೆಲಸ ಮಾಡುವವರೆಲ್ಲಾ ಕಾರ್ಮಿಕರೇ ಆಗಿರುತ್ತಾರೆ. ಸಾವಿರಾರು ಕಾರ್ಖಾನೆಗಳಲ್ಲಿ ಉತ್ಪಾದನರಂಗ ಮತ್ತು ಸೇವಾ ರಂಗಗಳಲ್ಲಿರುವ ಕಾರ್ಮಿಕರು  ದೇಶದ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಕಾರ್ಮಿಕರಲ್ಲಿ ಯಾವುದೇ ಸಾವು-ನೋವುಗಳುಂಟಾದಲ್ಲಿ ಅಂತಹ ಕಾರ್ಮಿಕರ ನೆರವಿಗಾಗಿ ವೇತನ ಹಕ್ಕು, ಕನಿಷ್ಠ ವೇತನ ಕಾಯ್ದೆ, ಸಮಾನ ವೇತನ, ಹೆರಿಗೆ ಪ್ರಸೂತಿಗಳಂತಹ ಹಲವಾರು ಯೋಜನೆಗಳು ಕಾರ್ಮಿಕರ ಹಿತದೃಷ್ಠಿಯಿಂದ ಇದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅಲ್ಲದೇ, ಕಾರ್ಮಿಕರು ಕಾರ್ಖಾನೆಗಳ ಬೆನ್ನೆಲುಬು, ಕಾರ್ಖಾನೆಗಳಲ್ಲಿ ಮಹಿಳೆಯರ ಪಾತ್ರ ಅಪಾರ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಸರಕು ಮತ್ತು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರು, ಶಾಲಾಮಕ್ಕಳು ಹಾಗೂ ಸಾರ್ವಜನಿಕರನ್ನು ಸಾಗಿಸುವುದು ಅಪರಾಧವಾಗಿದೆ. ಚಾಲಕರು ಕಾನೂನಿನ ಅರಿವು ಇಲ್ಲದೆ ಈ ರೀತಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದರೆ ತಕ್ಷಣವೇ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದರು.

ಈ ಸಂಬಂಧ ರಾಜ್ಯ ಮಟ್ಟದಿಂದ ನಿರ್ದೇಶನ ನೀಡಿದ್ದು ವಾಹನ ವ್ಯವಸ್ಥೆಗೆ ಸಮಸ್ಯೆಯಾಗಿದ್ದರೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಹಾಗೂ ಶಾಲಾ ಮಕ್ಕಳನ್ನು ಕರೆದೊಯ್ಯುವ ಶಾಲಾ ಬಸ್‍ಗಳು ಅಥವಾ ಖಾಸಗಿ ವಾಗನಗಳು ವಿದ್ಯಾರ್ಥಿಗಳನ್ನು ಮಿತಿ ಮೀರಿದಂತೆ ಕರೆದೊಯ್ಯುವುದು ಶಿಕ್ಷಾರ್ಹ ಅಪರಾದ ಹಾಗಾಗಿ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಶಾಲೆಗಳ ಹಾಗೂ ವಾಹನ ಚಾಲಕರ ಜವಾಬ್ದಾರಿಯಾಗಿದ್ದು, ನಮ್ಮ ಹಾಸನ ಜಿಲ್ಲೆಯಲ್ಲಿ ಈ ಸಂಬಂಧ ಶೇ.100ರಷ್ಟು ಅಪರಾಧ ವಿಲ್ಲದಂತೆ ಕಾಪಾಡೋಣ ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಯವರಾದ ಡಾ.ಕೆ.ಎನ್. ವಿಜಯ್ ಪ್ರಕಾಶ್ ಮಾತನಾಡಿ, ಕಟ್ಟಡ ಕಾರ್ಮಿಕರ ನಿರಂತರ ಶಕ್ತಿ, ಪರಿಶ್ರಮದಿಂದಾಗಿ ಇಂದು ಆಕಾಶದೆತ್ತರದ ಮಟ್ಟಕ್ಕೆ ಹಲವಾರು ಕಟ್ಟಡಗಳ ನಿರ್ಮಾಣವಾಗಿದೆ. ಆದರೆ ಇಂದು ಕಟ್ಟಡ ಕಾರ್ಮಿಕರ ಜೀವನ ಶೈಲಿಯಲ್ಲಿ ಸುಧಾರಣೆಯಾಗಬೇಕಿದೆ. ಸರ್ಕಾರದಿಂದ ಸಿಗುವಂತಹ ಎಲ್ಲಾ ಯೋಜನೆಗಳ ಅನುಕೂಲವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಂಡು ಸಾಮಾಜಿಕವಾಗಿ ಬಲಗೊಳ್ಳಬೇಕು ಎಂದರು.

ಉಪ ಕಾರ್ಮಿಕ ಆಯುಕ್ತಾರದ ವೆಂಕಟೇಶ್ ಅಪ್ಪಯ್ಯ ಶಿಂದಿಹಟ್ಟಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಾರ್ಮಿಕ ಇಲಾಖಾ ವತಿಯಿಂದ ಕಾರ್ಮಿಕರ ಹಿತಾದೃಷ್ಠಿಯಂದ ಕಾರ್ಮಿಕ ಕಾನೂನು ಅನುಷ್ಠಾನವಾಗಿದ್ದು  ಕಾರ್ಮಿಕರ ಸಮಸೈಗಳನ್ನು ನಿವಾರಿಸಲು ಹಲವಾರು ಯೋಜನೆಗಳು ಜಾರಿಯಲ್ಲಿದೆ. ಈಗಾಗಲೇ 15000 ಕಾರ್ಮಿಕರಿಗೆ ಸುಮಾರು 11 ಕೋಟಿ 13 ಲಕ್ಷದಷ್ಟು ಸೌಲಭ್ಯ ದೊರೆಯುತ್ತಿದೆ ಎಂದರಲ್ಲದೆ, ಸರಕು ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯಬಾರದು ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್ ಕುಮಾರ್ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಲ್ಲಿ ಉಂಟಾಗುವ ಕಾನೂನು ತೊಡಕುಗಳ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮದ ಉಪನ್ಯಾಸ ನೀಡುತ್ತಾ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಲ್ಳುವಂತೆ ತಿಳಿಸಿದರು.

ಕಾರ್ಮಿಕ ಇಲಾಖೆಯ ಕಾರ್ಮಿಕಾಧಿಕಾರಿಯವರಾದ ಹೆಚ್.ಎನ್.ರಮೇಶ್ ಅವರು ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ಪರಿಹಾರ ಯೋಜನೆ ಮತ್ತು ಅಪಘಾತ ಜೀವರಕ್ಷಕ ಯೋಜನೆ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ  ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಸಿ.ಕೆ. ಬಸವರಾಜ್, ಅಪರ ಪೊಲೀಸ್ ಅಧೀಕ್ಷಕರಾದ ನಂದಿನಿ. ಬಿ.ಎನ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರಾದ ಕಮಲ್ ಕುಮಾರ್ ಹೆಚ್.ಆರ್., ವಕೀಲರ ಸಂಘದ ಅಧ್ಯಕ್ಷರಾದ ಜೆ.ಪಿ. ಶೇಖರ್, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧಯಕ್ಷರಾದ ಹೆಚ್.ಟಿ. ಅಣ್ಣಾಜಿ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News