ಡಿವೈಡರ್ ಗೆ ಕಾರು ಢಿಕ್ಕಿ; ಐವರ ಸಾವು
Update: 2019-05-01 21:02 IST
ಚಿತ್ರದುರ್ಗ,ಮೇ 1: ಕಾರೊಂದು ರಸ್ತೆಯ ಪಕ್ಕದ ಡಿವೈಡರ್ ಹಾಗೂ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟ ಘಟನೆ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಯಲ್ಲಿ ಬುಧವಾರ ಸಂಭವಿಸಿದೆ.ಜೆ.ಪಿ.ನಗರದ ತಾಯಮ್ಮ(50), ಸುಶ್ಮಿತಾ(13), ಲತಾ (26), ವರ್ಣಿತಾ(9), ಜಾಹ್ನವಿ(3) ಮೃತಪಟ್ಟವರು , ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ 5:45ಕ್ಕೆ ಭದ್ರಾವತಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ ಟೈರ್ ಒಡೆದಿದೆ. ಪರಿಣಾಮವಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದು, ಬಳಿಕ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಭೇಟಿ ನೀಡಿದ್ದಾರೆ.