ಕರ್ನಾಟಕದ ಮುಖ್ಯನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ನೇಮಕ
Update: 2019-05-01 23:12 IST
ಬೆಂಗಳೂರು, ಮೇ 1: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇಮಕಗೊಂಡಿದ್ದಾರೆ.
ಓಕಾ ಅವರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಕಾನೂನು ಸಚಿವಾಲಯ ಹಾಗೂ ರಾಷ್ಟ್ರಪತಿ ಭವನಕ್ಕೆ ಶಿಫಾರಸು ಮಾಡಿತ್ತು.
ಕೊಲಿಜಿಯಂ ಶಿಪಾರಸನ್ನು ಮಾನ್ಯ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ಓಕಾ ಅವರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
1960ರ ಮೇ 25ರಂದು ಜನಿಸಿದ ಓಕಾ ಅವರು ಬಾಂಬೆ ವಿವಿಯಲ್ಲಿ ಬಿಎಸ್ಸಿ, ಕಾನೂನು ಹಾಗೂ ಎಲ್ಎಲ್ಎಂ ಪದವಿ ಗಳಿಸಿದ್ದಾರೆ.ಇವರ ತಂದೆ ಶ್ರೀನಿವಾಸ ಓಕಾ ಸಹ ವಕೀಲರಾಗಿದ್ದು ಅವರ ಕೆಳಗೆ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. 2003ರಲ್ಲಿ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದ ಅವರು 2005ರಿಂದ ಖಾಯಂ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.