ಯೋಧನಿಂದ ಗುಂಡು ಹಾರಾಟ: ಎಸ್ಸೈ ಸಾವು; ಇಬ್ಬರಿಗೆ ಗಾಯ

Update: 2019-05-02 17:11 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ, ಮೇ 2: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅಸ್ಸಾಂ ರೈಫಲ್ಸ್ ತುಕಡಿಯ ಯೋಧನೊಬ್ಬ ಸಹೋದ್ಯೋಗಿಗಳತ್ತ ಗುಂಡು ಹಾರಿಸಿದ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ. ಘಟನೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. ಹೌರಾ ಜಿಲ್ಲೆಯ ಬಗ್ನಾನ್ ಗ್ರಾಮದ ಜ್ಯೋತಿರ್ಮಯಿ ಹೈಸ್ಕೂಲ್‌ನ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತನಾಗಿದ್ದ ಯೋಧ ಲಕ್ಷ್ಮೀಕಾಂತ್ ಬರ್ಮನ್ ಎಂಬಾತ ಈ ಕೃತ್ಯವೆಸಗಿದ್ದಾನೆ. ತನ್ನ ರೈಫಲ್ಸ್‌ನಿಂದ ಈತ 13 ಸುತ್ತು ಗುಂಡು ಹಾರಿಸಿದ್ದು ಸಬ್‌ಇನ್‌ಸ್ಪೆಕ್ಟರ್ ಭೋಲಾನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಸಬ್‌ಇನ್‌ಸ್ಪೆಕ್ಟರ್ ಅನಿಲ್ ರಾಜ್‌ವಂಶಿಯ ತಲೆಗೆ ಹಾಗೂ ಕಾನ್‌ಸ್ಟೇಬಲ್ ರಂತುಮಣಿ ಬೊರೊನ ಕೈಗೆ ಗುಂಡೇಟು ತಗುಲಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬರ್ಮನ್ ಏಕಾಏಕಿ ಇಂತಹ ಕೃತ್ಯ ನಡೆಸಿರುವ ಕಾರಣ ಸ್ಪಷ್ಟವಾಗಿಲ್ಲ .ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮುಂದಿನ ಮೂರು ಹಂತದ ಮತದಾನದ ಸಂದರ್ಭ ಎಲ್ಲಾ ಮತದಾನ ಕೇಂದ್ರಗಳಲ್ಲೂ ಕೇಂದ್ರ ಭದ್ರತಾ ಪಡೆಗಳನ್ನೂ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News