21 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ: ಶಾಸಕ ಸಿ.ಟಿ.ರವಿ

Update: 2019-05-03 11:54 GMT

ಚಿಕ್ಕಮಗಳೂರು, ಮೇ 3: ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ. 2 ಕ್ಷೇತ್ರಗಳಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡಿದ್ದು, 5 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ 50-50 ಇದೆ. ಉಳಿದ 21 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುವುದು ನಿಶ್ಚಿತ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ವ್ಯಾಪಕವಾಗಿತ್ತು. ಬಿಜೆಪಿ ಅಭ್ಯರ್ಥಿಗಳಿಗಿಂತ ಮೋದಿ ಹಾಗೂ ರಾಷ್ಟ್ರೀಯ ವಿಚಾರಗಳು ಹೆಚ್ಚು ಚರ್ಚೆಯಲ್ಲಿದ್ದವು. ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಉತ್ಸಾಹ ಯುವಜನತೆಯಲ್ಲಿ ಹೆಚ್ಚಿದ್ದು, ಮೋದಿ ಪರವಾಗಿ ಬಿಜೆಪಿ ಕಾರ್ಯಕರ್ತರಲ್ಲದ ಸ್ವಯಂಸೇವಕರು ಈ ಬಾರಿ ಪಕ್ಷದ ಪರವಾಗಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯ ನಂತರದಲ್ಲಿ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಅವರು ಅತೀ ಹೆಚ್ಚು ಜನರನ್ನು ಪ್ರಭಾವಿತಗೊಳಿಸಿದ್ದರು. ಇವರೆಲ್ಲರಿಗಿಂತಲೂ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಇಡೀ ದೇಶದ ಜನರನ್ನು ಪ್ರಭಾವಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣಕ್ಕೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು. 

ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬುದು ಪಕ್ಷದ ಆಂತರಿಕೆ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದ ಸಿ.ಟಿ.ರವಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ 1 ಲಕ್ಷ 75 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿಗೆ 75 ಸಾವಿರ ಮತಗಳ ಲೀಡ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗಾಯತ-ವೀಶಶೈವ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರ ಲೆಟರ್ ಹೆಡ್ ಬಳಸಿ ಕೇಂದ್ರಕ್ಕೆ ಪತ್ರ ಬರೆದಿರುವ ಆರೋಪದ ಮೇರೆಗೆ ಪತ್ರಕರ್ತ ಹೇಮಂತ್ ಕುಮಾರ್, ಶೃತಿ ಬೆಳ್ಳುಬ್ಬಿ, ಶಾರದಾ ಎಂಬವರನ್ನು ಬಂಧಿಸಿ ದೌರ್ಜನ್ಯ ಎಸಗಲಾಗುತ್ತಿದೆ. ಅಲ್ಲದೇ ಸಿಎಂ ಕುಮಾರಸ್ವಾಮಿ ಅವರ ಖಾಸಗಿ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಹಾಕಿದ್ದ ಆರೋಪದ ಮೇರೆಗೆ ಅಜಿತ್‍ಶೆಟ್ಟಿ ಎಂಬವರನ್ನು ಬಂಧಿಸಿಡಲಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಈ ವಿಚಾರದಲ್ಲಿ ಬಂಧಿತರ ಮೇಲೆ ಪೊಲೀಸ್ ದೌರ್ಜನ್ಯ ನಡೆಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಬಂಧಿತರನ್ನು ರಾಜ್ಯ ಸರಕಾರ ಬೇಷರತ್ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಶ್ರೀಲಂಕಾದ ಸರಣಿ ಬಾಂಬ್ ಸ್ಪೋಟದಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪುಲ್ವಾಮ, ಛತ್ತೀಸ್‍ಗಢ, ಮಹಾರಾಷ್ಟ್ರಗಳಲ್ಲಿ ಸೈನಿಕರು, ಪೊಲೀಸರು ಹತರಾಗಿದ್ದಾರೆ. ಈ ಘಟನೆಗಳಲ್ಲಿ ಪಾತಕಿಗಳ ಸಿದ್ಧಾಂತ, ಕಾರಣ ಬೇರೆಬೇರೆಯಾಗಿದ್ದರೂ ಕೊಲ್ಲುವ ಮಾನಸಿಕತೆ ಒಂದೇ ಆಗಿದೆ. ಆದರೆ ಕೊಲ್ಲಲು ಪ್ರಚೋದನೆ ನೀಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಅತ್ಯಗತ್ಯವಾಗಿದೆ. ಇತರ ಧರ್ಮಗಳ ಅಸ್ತಿತ್ವ ಒಪ್ಪಿಕೊಳ್ಳದ ಮಾನಸಿಕತೆಯಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದ ಅವರು, ನಕ್ಸಲ್ ಚಳವಳಿ ಜಗತ್ತಿನಾದ್ಯಂತ ವಿಫಲವಾಗಿದೆ. ನಕ್ಸಲ್ ಸಿದ್ಧಾಂತ ಹರಡುವವರು ಸಿಟಿಗಳಲ್ಲಿ, ವಿವಿಗಳಲ್ಲಿದ್ದಾರೆ. ಕಂಡವರ ಮಕ್ಕಳನ್ನು ಕಾಡಿಗೆ ಕಳುಹಿಸಿ ಬಲಿ ನೀಡುತ್ತಿದ್ದಾರೆ. ಪ್ರಶ್ನಿಸಿದರೆ ಅರ್ಬನ್ ನಕ್ಸಲ್ ಎನ್ನುತ್ತಿದ್ದಾರೆ. ಇಂತವರ ಬಗ್ಗೆ ಸರಕಾರಗಳಿಗೆ ಸಿಂಪಥಿ ಇರಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಕೋಟೆ ರಂಗನಾಥ್, ಮುಖಂಡ ಎಚ್.ಡಿ.ತಮ್ಮಯ್ಯ ಉಪಸ್ಥಿತರಿದ್ದರು.

ನಾನು ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಅಧ್ಯಕ್ಷರ ನೇಮಕಕ್ಕೆ ಮೆರಿಟ್ ಬೇಕಾಗಿಲ್ಲ. ಮೀಸಲಾತಿಯೂ ಇಲ್ಲ. ತಾನಾಗಿ ಹುದ್ದೆಯನ್ನು ಕೇಳಿಕೊಂಡೂ ಹೋಗುವುದಿಲ್ಲ. ರಾಜ್ಯಾಧ್ಯಕ್ಷ ನೇಮಕ ವಿಚಾರ ವರಿಷ್ಠರಿಗೆ ಬಿಟ್ಟಿದ್ದು, ಅಧ್ಯಕ್ಷನ ಸ್ಥಾನ ಸಿಕ್ಕಿದಲ್ಲಿ ಅದಕ್ಕೆ ನ್ಯಾಯ ಸಲ್ಲಿಸುವ ಕೆಲಸ ಮಾಡುತ್ತೇನೆ.
- ಸಿ.ಟಿ.ರವಿ, ಶಾಸಕ

ಚುನಾವಣಾ ಫಲಿತಾಂಶದ ಬಳಿಕ ಸಮ್ಮಿಶ್ರ ಸರಕಾರ ಪತನವಾಗಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಳಗಿನ ಮುಸುಕಿನ ಗುದ್ದಾಟವೇ ಸಾಕು. ಸಮ್ಮಿಶ್ರ ಸರಕಾರದೊಳಗಿನ ಸಂಘರ್ಷದಿಂದಲೇ ಸರಕಾರ ಪತಗೊಳ್ಳಲಿದೆ ಎಂದು ನಾವು ಹೇಳಿದ್ದು, ಸರಕಾರ ಬೀಳಿಸಲು ನಾವು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ.
- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News