ಎಲ್ಲರೂ ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ: ಸಿ.ಹೆಚ್.ವಿಜಯ್ ಶಂಕರ್

Update: 2019-05-03 12:09 GMT

ಮಡಿಕೇರಿ, ಮೇ 3 : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಚುನಾವಣೆಯನ್ನು ಎದುರಿಸಿರುವ ನನ್ನ ಗೆಲುವು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿರುವ ಸಿ.ಹೆಚ್.ವಿಜಯ್ ಶಂಕರ್, ಚುನಾವಣಾ ಹಂತದಲ್ಲಿ ನಡೆದು ಹೋಗಿರುವ ಸಣ್ಣಪುಟ್ಟ ತಪ್ಪುಗಳನ್ನು ಕೆದಕುವ ಕೆಲಸವನ್ನು ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ತಿಪ್ಪೆಯನ್ನು ಕೆದಕುವುದರಿಂದ ಮುತ್ತುರತ್ನಗಳೇನು ದೊರಕುವುದಿಲ್ಲವೆಂದು ಅವರು ವ್ಯಾಖ್ಯಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ಶಂಕರ್, ಚುನಾವಣಾ ಹಂತದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರಾದಿಯಾಗಿ ಎಲ್ಲರೂ ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ. ಇದರ ನಡುವೆಯೂ ಒಳ, ಹೊರಗೆ ಶೇ.5 ರಿಂದ 10 ರಷ್ಟು ಮತ ವ್ಯತ್ಯಾಸಗಳು ಆಗಿರಬಹುದು. ಆದರೆ ಇದು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಕಸ್ಮಿಕವಾಗಿ ಆಗಿಲ್ಲ. ವಿಧಾನಸಭಾ ಚುಣಾವಣೆಯ ಬಳಿಕ ಈ ಎರಡೂ ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡಿದ ಹಂತದಿಂದಲೇ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸುವುದಕ್ಕೆ ಅಗತ್ಯವಾದ ಮಾನಸಿಕ ಸಿದ್ಧತೆಗಳು ನಡೆದಿತ್ತು. ಹೀಗಿದ್ದೂ ಕೆಲವು ಕ್ಷೇತ್ರಗಳಲ್ಲಿ ಸೀಟು ಹಂಚಿಕೆಯಲ್ಲಿ ಒಂದಷ್ಟು ವಿಳಂಬವಾಯಿತಾದರು ಎರಡೂ ಪಕ್ಷಗಳು ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿವೆ ಎಂದು ಹೇಳಿದರು.

ಕೇಂದ್ರದಲ್ಲಿ ಮುಂದಿನ ಸರ್ಕಾರ ರಚನೆಗೆ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಲಿವೆ, ರಾಜ್ಯದಲ್ಲಿ ಹೇಗೆ ಮೈತ್ರಿ ಸರ್ಕಾರದ ರಚನೆಯಾಗಿದೆಯೋ ಅದೇ ರೀತಿ ಕೇಂದ್ರದಲ್ಲಿಯೂ ಸರ್ಕಾರ ರಚನೆಗೆ ಮೈತ್ರಿಕೂಟದ ಅನಿವಾರ್ಯತೆ ಇದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನಷ್ಟೆ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷವೂ ಇದಕ್ಕೆ ಸರಿಸಮಾನ ಸ್ಥಾನಗಳನ್ನು ಪಡೆಯಲಿರುವುದರಿಂದ ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಾದೇಶಿಕ ಪಕ್ಷಗಳ ಸಹಕಾರ ಅಗತ್ಯವೆಂದು ವಿಜಯ್ ಶಂಕರ್ ಭವಿಷ್ಯ ನುಡಿದರು.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ನಿಷ್ಟಾವಂತರು ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ. ಇದನ್ನು ಹೊರತು ಪಡಿಸಿದ ಸಣ್ಣ, ಪುಟ್ಟ ವ್ಯತ್ಯಾಸಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಮೈತ್ರಿ ಪಕ್ಷಗಳ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿದ್ದಲ್ಲಿ ಅದನ್ನು ಆಯಾ ಪಕ್ಷಗಳು ಮುಖಂಡರು ನಿಯಂತ್ರಿಸಲಿದ್ದಾರೆ. ಆಯಾ ಸಂದರ್ಭಕ್ಕೆ ತಕ್ಕಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದರು.

18 ರಿಂದ 20 ಸ್ಥಾನ
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು 18 ರಿಂದ 20 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಯಾವುದೇ ಕಾರಣಕ್ಕೂ 16 ಸ್ಥಾನಗಳಿಗಿಂತ ಕೆಳಕ್ಕೆ ಇಳಿಯುವುದಿಲ್ಲವೆಂದು ವಿಜಯ್ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

 

ಬಿಜೆಪಿ ಏನೂ ಮಾಡಿಲ್ಲ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಮೂಲ ವಿಚಾರಗಳನ್ನು ಮರೆತು ರಾಜಕಾರಣ ಮಾಡಿದೆ ಎಂದು ಅವರು, ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ತಾನು ಅಧಿಕಾರಕ್ಕೆ ಬಂದಲ್ಲಿ ತೆಗೆಯುವ ಮಾತನಾಡುವ ಆ ಪಕ್ಷ ಕಳೆದ ಐದು ವರ್ಷಗಳಲ್ಲಿ ಏನನ್ನೂ ಮಾಡಿಲ್ಲವೆಂದು ಟೀಕಿಸಿದರು. ಕಾಶ್ಮೀರಿ ಪಂಡಿತರಿಗೆ ಮತ್ತೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸುವ ಮಾತನಾಡುವ ಬಿಜೆಪಿ ಇಲ್ಲಿಯವರೆಗೆ ಒಬ್ಬನೇ ಒಬ್ಬ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿಲ್ಲವೆಂದು ಆರೋಪಿಸಿದರು.

ಮೋದಿಗೆ ರಾಮ ಬೇಡ
ರೈತರ, ಕೃಷಿಕರ ಸಮಸ್ಯೆಗಳ ಬಗ್ಗೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ  ಬಿಜೆಪಿ ಚರ್ಚಿಸುತ್ತಿಲ್ಲ. ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ ಮೋದಿ ಅವರು ಅಲ್ಲಿನ ರಾಮಮಂದಿರಕ್ಕೆ ಭೇಟಿ ನೀಡಿಲ್ಲ. ಸ್ವಂತ ಲಾಭಕ್ಕಾಗಿ ಅವರಿಗೆ ‘ರಾಮ’ಬೇಕಾಗಿದ್ದಾನೆಯೇ ಹೊರತು, ಮನಃಪೂರ್ವಕವಾಗಿ ರಾಮನನ್ನು ಅವರು ಸ್ವೀಕರಿಸಿಲ್ಲವೆಂದು ಅಭಿಪ್ರಾಯಪಟ್ಟರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜನತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಜಿಲ್ಲಾಡಳಿತ, ಚುನಾವಣಾ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ವಿಜಯ್ ಶಂಕರ್ ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಎಲ್ಲಾ ನಾಯಕರು, ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಈ ಬಾರಿಯ ಲೋಕಸಭಾ ಚುಣಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಪಕ್ಷದ ಎಲ್ಲಾ ಹಂತದ ಪ್ರಮುಖರು ಮತ್ತು ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಸಹಕಾರವನ್ನು ನೀಡಿದ್ದು, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದೆ. ಜಿಲ್ಲಾಧ್ಯಕ್ಷನಾಗಿ ಎದುರಿಸಿದ ಪ್ರಥಮ ಚುನಾವಣೆಯಲ್ಲಿನ ಯಶಸ್ಸು ಜಿಲ್ಲೆಯಲ್ಲಿ ಕಾಂಗ್ರೆಸ್ ಗತವೈಭವ ಮರುಕಳಿಸುವ ಪ್ರಥಮ ಹೆಜ್ಜೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಸದಸ್ಯ ಟಿ.ಪಿ.ರಮೇಶ್ ಹಾಗೂ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News