×
Ad

ಚಾಮರಾಜನಗರ: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಭೇಟಿ, ಪರಿಶೀಲನೆ

Update: 2019-05-03 17:46 IST

ಚಾಮರಾಜನಗರ, ಮೇ 3: ಗಾಳಿ, ಮಳೆಯಿಂದ ಬೆಳೆ ಹಾನಿ ಸಂಭವಿಸಿರುವ ಚಾಮರಾಜನಗರ ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಅಧಿಕಾರಿಗಳೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚೆಗೆ ಸುರಿದ ಭಾರಿ ಗಾಳಿ ಸಹಿತ ಮಳೆಯಿಂದ ಬೆಳೆ ಹಾನಿ ಉಂಟಾಗಿರುವ ತಾಲೂಕಿನ ಕಿಲಗೆರೆ, ಯಾನಗನಹಳ್ಳಿ, ಮಾದಲವಾಡಿ ಹಾಗೂ ಬೇಲುಕುಪ್ಪೆ, ಮಾಯನಾಯಕನಪುರ ಗ್ರಾಮಗಳಲ್ಲಿರುವ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿಯನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ವೀಕ್ಷಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಅವರು ಮಳೆಯಿಂದ ನಾಶವಾಗಿರುವ ಬೆಳೆಯ ಮಾಹಿತಿ ಸಂಗ್ರಹಿಸಿ ನಿಖರ ವರದಿಯನ್ನು ಶೀಘ್ರವೇ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ರೈತರು ಬೆಳೆದು ಹಾನಿಗೊಳಗಾಗಿರುವ ಬೆಳೆ ಎಷ್ಟು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ ಯಾವ ಯಾವ ಬೆಳೆಗಳು ನಾಶವಾಗಿವೆ ಎಂಬ ಬಗ್ಗೆ ತುರ್ತಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾಗಿರುವ ಬಾಳೆ, ಕಬ್ಬು, ತೆಂಗು ಬೆಳೆಗಳನ್ನು ಜಿಲ್ಲಾಧಿಕಾರಿ ಅವರು ಪರಿಶೀಲಿಸಿದರು. ಇದೇ ವೇಳೆ ರೈತರು ಮಳೆ-ಗಾಳಿಯಿಂದ ಹಾನಿಗೆ ಒಳಗಾಗಿರುವ ಬೆಳೆಗಳ ಕುರಿತು ಮಾಹಿತಿ ನೀಡಿ ತಮ್ಮ ಅಹವಾಲು ಸಲ್ಲಿಸಿದರು. 

ಬೆಳೆ ಹಾನಿ ಪರಿಹಾರವನ್ನು ಶೀಘ್ರವೇ ಹಾಗೂ ಸರಿಯಾದ ಪ್ರಮಾಣದಲ್ಲಿ ವಿತರಿಸಬೇಕೆಂದು ಮನವಿ ಮಾಡಿದರು. ತಾವು ಬೆಳೆದ ಬೆಳೆಯು ಇನ್ನೊಂದು ತಿಂಗಳಲ್ಲಿ ಕೈ ಸೇರಬೇಕಿತ್ತು. ಈ ಹಂತದಲ್ಲಿ ಮಳೆಯಿಂದ ನಾವು ಬೆಳೆದ ಬೆಳೆ ನಾಶವಾಗಿದೆ. ನಾವು ತೀರಾ ಸಂಕಷ್ಟದಲ್ಲಿದ್ದೇವೆ. ನಮ್ಮ ಬೆಳೆಗೆ ಅನುಗುಣವಾಗಿ ಪರಿಹಾರ ಕೊಡಿಸಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ರೈತರು, ಬೆಳೆಗಾರರು ಮನವಿ ಮಾಡಿಕೊಂಡರು. 

ಇದೇ ವೇಳೆ ಜಿಲ್ಲಾಧಿಕಾರಿಯವರು ಮಾತನಾಡಿ, ಬೆಳೆ ಹಾನಿಯ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಸೂಕ್ತ ಹಾಗೂ ಸಮರ್ಪಕ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದರು.

ತಹಶೀಲ್ದಾರ್ ಯೋಗಾನಂದ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ, ಶಿವಲಿಂಗಪ್ಪ, ಸಹಾಯಕ ನಿರ್ದೇಶಕ ನಾಗೇಶ್, ಸಹಾಯಕ ತೋಟಗಾರಿಕೆ ಅಧಿಕಾರಿ ನಂಜುಂಡಯ್ಯ, ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News