ಮೇ 19ಕ್ಕೆ ವಿಧಾನಸಭಾ ಉಪಚುನಾವಣೆ: ಆಯೋಗ ಸಕಲ ಸಿದ್ಧತೆ

Update: 2019-05-03 13:02 GMT

ಬೆಂಗಳೂರು, ಮೇ 3: ಸಚಿವ ಸಿ.ಶಿವಳ್ಳಿ ಅಕಾಲಿಕ ಮರಣದಿಂದ ತೆರವಾಗಿರುವ ಕುಂದಗೋಳ ಹಾಗೂ ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವುಗೊಂಡಿರುವ ಚಿಂಚೋಳಿ ವಿಧಾನಸಭಾ ಉಪ ಚುನಾವಣೆಗೆ ಆಯೋಗವು ಸಕಲ ಸಿದ್ಧತೆ ಕೈಗೊಂಡಿದ್ದು, ಈ ಎರಡೂ ಕ್ಷೇತ್ರಗಳಿಂದ 3.83 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಈ ಸಂಬಂಧ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಎರಡೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 25 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಚುನಾವಣೆ ನಡೆಸಲು ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗಿದೆ. ಮತಗಟ್ಟೆಯ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ತರಬೇತಿ ನೀಡಿ ಚುನಾವಣೆಗೆ ಸಜ್ಜುಗೊಳಿಸಲಾಗಿದೆ ಎಂದರು.

ವಿಧಾನಸಭೆಗಳ ಉಪ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ 99047 ಪುರುಷರು, 94806 ಮಹಿಳೆಯರು ಹಾಗೂ 16 ಇತರರು ಸೇರಿದಂತೆ 1.93 ಲಕ್ಷ ಮತದಾರರಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ 97501 ಪುರುಷರು, 91938 ಮಹಿಳೆಯರು ಹಾಗೂ 5 ಇತರರು ಸೇರಿದಂತೆ 1.89 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ 7908 ಮಂದಿ ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ. 19887 ಯುವ ಮತದಾರರಿದ್ದು, 4340 ದಿವ್ಯಾಂಗ ಮತದಾರರಿದ್ದಾರೆ. ಚಿಂಚೋಳಿ ಕ್ಷೇತ್ರದಲ್ಲಿ 241ಮತಗಟ್ಟೆಗಳು ಹಾಗೂ ಕುಂದಗೋಳ ಕ್ಷೇತ್ರದಲ್ಲಿ 214 ಮತಗಟ್ಟೆಗಳಿವೆ. ಎರಡು ಕ್ಷೇತ್ರಗಳಲ್ಲಿ ತಲಾ ಎರಡು ಸಖಿ ಹಾಗೂ ತಲಾ ಒಂದು ದಿವ್ಯಾಂಗರು ನಿರ್ವಹಿಸುವ ಮತಗಟ್ಟೆಗಳಿವೆ ಎಂದರು.

ಒಟ್ಟಾರೆ ಎರಡೂ ಕ್ಷೇತ್ರದಲ್ಲಿ 85 ಸೂಕ್ಷ್ಮ ಮತಗಟ್ಟೆಗಳಿದ್ದು, ಕುಂದಗೋಳದಲ್ಲಿ 25 ಹಾಗೂ ಚಿಂಚೋಳಿಯಲ್ಲಿ 60 ಇವೆ. 19 ಮತಗಟ್ಟೆಗಳನ್ನು ಕೆಎಸ್‌ಆರ್‌ಪಿ ಪಡೆ, 22 ಮತಗಟ್ಟೆಗಳನ್ನು ವೆಬ್ ಕ್ಯಾಮೆರಾಗಳು ನಿರ್ವಹಿಸಿದರೆ, 46 ಮತಗಟ್ಟೆಗಳನ್ನು ಸೂಕ್ಷ್ಮ ವೀಕ್ಷಕರು ನಿರ್ವಹಣೆ ಮಾಡುತ್ತಾರೆ. ಅಲ್ಲದೆ, 6 ಮತಗಟ್ಟೆಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ ಎಂದು ತಿಳಿಸಿದರು.

ಕುಂದಗೋಳ ಕ್ಷೇತ್ರದಾದ್ಯಂತ 310 ಬಿಯು ಯೂನಿಟ್, 280 ಸಿಯು ಯೂನಿಟ್, 300 ವಿವಿ ಪ್ಯಾಟ್ ಹಾಗೂ ಚಿಂಚೋಳಿ ಕ್ಷೇತ್ರದಲ್ಲಿ 350 ಬಿಯು ಯೂನಿಟ್, 314 ಸಿಯು ಯೂನಿಟ್, 340 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕ್ರಿಮಿನಲ್ ಪ್ರಕರಣಗಳ ಪ್ರಕಟಿಸಲು ಸೂಚನೆ: ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಸಂಬಂಧ ಮೂರು ಬಾರಿ ಪತ್ರಿಕೆಗಳಲ್ಲಿ ಹಾಗೂ ಮೂರು ಬಾರಿ ದೃಶ್ಯ ಮಾಧ್ಯಮದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಮತದಾನದ ಹಿಂದಿನ 48 ಗಂಟೆಗಳ ಅವಧಿಯೊಳಗೆ ಇದನ್ನು ಮಾಡಬೇಕು ಹಾಗೂ ಇದರ ವೆಚ್ಚವನ್ನು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿದರು.

ಕಣದಲ್ಲಿರುವ ಪ್ರಮುಖರು:

ಚಿಂಚೋಳಿ: ಸುಭಾಷ್ ವಿ ರಾಥೋಡ್(ಕಾಂಗ್ರೆಸ್), ಡಾ.ಅವಿನಾಶ್ ಉಮೇಶ್ ಜಾಧವ್(ಬಿಜೆಪಿ), ಗೌತಮ್ ಬೊಮ್ಮನಹಳ್ಳಿ(ಬಿಎಸ್‌ಪಿ)

ಕುಂದಗೋಳ: ಕುಸುಮಾವತಿ ಸಿ.ಶಿವಳ್ಳಿ(ಕಾಂಗ್ರೆಸ್), ಚಿಕ್ಕನಗೌಡರ್(ಬಿಜೆಪಿ)

ನೀತಿ ಸಂಹಿತೆ ಸಡಿಲಿಕೆ:

ರಾಜ್ಯ ಸರಕಾರದ ಮನವಿಯ ಮೇರೆಗೆ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ಕೆಲವು ಸಡಿಲಿಕೆ ನೀಡಲಾಗಿದೆ. ಅದರಲ್ಲಿ ಮೇ 23 ಕ್ಕೆ ಅನ್ವಯವಾಗುವಂತೆ ಟೆಂಡರ್‌ಗಳು ಹಾಗೂ ವರ್ಕ್ ಆರ್ಡರ್ ನೀಡುವುದು, ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವುದು, ರಾಜ್ಯಸರಕಾರದ ಸಂಬಂಧಿತ ಇಲಾಖೆಗಳಲ್ಲಿ ನೇಮಕಾತಿಗಳಿಗೆ ಹಾಗೂ ಹೊಸ ನೇಮಕ ಹಾಗೂ ವರ್ಗಾವಣೆಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News