ಜಗದೀಶ್ ಶೆಟ್ಟರ್ ಆಟ ನಡೆಯಲ್ಲ: ಸಿದ್ದರಾಮಯ್ಯ
ಹುಬ್ಬಳ್ಳಿ, ಮೇ 3: ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಟ ಇಲ್ಲಿ ನಡೆಯುವುದಿಲ್ಲ. ಅವರ ಬುಗುರಿ ಎಲ್ಲ ಕಡೆ ತಿರುಗುವುದಾದರೆ, ಅವರೇ ಗೆಲ್ಲಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ಕ್ಷೇತ್ರದ ನಮ್ಮ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರವಾಗಿ ಮೇ 14 ರಿಂದ 17ರವರೆಗೆ ನಾಲ್ಕು ದಿನ ಪ್ರಚಾರ ಕೈಗೊಳ್ಳುತ್ತೇನೆ. ಸ್ಥಳೀಯ ಮುಖಂಡರು ನಮಗೆ ಸಹಕಾರ ನೀಡಲಿದ್ದಾರೆ ಎಂದರು.
ಕುಸುಮಾ ಶಿವಳ್ಳಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವವರಿಗೆ ಇತ್ತೀಚೆಗೆ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಕುಟುಂಬ ಹಣ ನೀಡಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಶಿವಳ್ಳಿ ಅವರ ಕುಟುಂಬವೇ ಸಂಕಷ್ಟದಲ್ಲಿದೆ. ಪಕ್ಷದಿಂದ ಚುನಾವಣೆಯ ವೆಚ್ಚ ಭರಿಸುವಂತಹ ಪರಿಸ್ಥಿತಿಯಿದೆ. ಅವರು ಹೇಗೆ ಬಂಡಾಯ ಅಭ್ಯರ್ಥಿಗೆ ಹಣ ಕೊಡಲು ಸಾಧ್ಯ ಎಂದರು.
ಕುಂದಗೋಳ ಹಾಗೂ ಚಿಂಚೋಳಿ ಎರಡು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸಿದ್ದರಾಮಯ್ಯ ಹೇಳಿದರು.