ಎಸೆಸೆಲ್ಸಿಯಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ನೋಟಿಸ್: ಧಾರವಾಡ ಡಿಸಿ
ಧಾರವಾಡ, ಮೇ 3: 2019ನೆ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯ 33 ಶಾಲೆಗಳಲ್ಲಿ ಶೇ.40ಕ್ಕಿಂತ ಕಡಿಮೆ ಮತ್ತು 3 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ(ಆಡಳಿತ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಅನುತ್ತೀರ್ಣಗೊಂಡಂತಹ ಎಲ್ಲಾ ಮಕ್ಕಳಿಗೆ ನಾಳೆಯಿಂದಲೆ ಪರಿಹಾರ ಬೋಧನೆಯನ್ನು ಕೈಗೊಂಡು, ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾದ ಸೂಚನೆ ನೀಡಿದರು.
ಶೇ.40ಕ್ಕಿಂತ ಕಡಿಮೆ ಫಲಿತಾಂಶ ಸಾಧಿಸಿದ ಪ್ರತಿಯೊಂದು ಶಾಲೆಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿ ವರದಿ ಪಡೆಯಲು ಡಿಡಿಪಿಐ ಅವರಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಒಟ್ಟು 6135 ಮಕ್ಕಳು ಅನುತ್ತೀರ್ಣರಾಗಿದ್ದು, ಆಯಾ ವಲಯದಲ್ಲಿ ವಿಶೇಷ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಿ ವಿಷಯ ಪರಿಣಿತಿಯುಳ್ಳ ಶಿಕ್ಷಕರನ್ನು ತರಗತಿಗಳಿಗೆ ನೇಮಕಾತಿ ಮಾಡಿ ಆದೇಶ ಹೊರಡಿಸಲು ಸೂಚಿಸಿದರು.
ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸಕ್ತ ಸಾಲಿನ ಜೂ.21ರಿಂದ ಪ್ರಾರಂಭಗೊಳ್ಳುವ ಪೂರಕ ಪರೀಕ್ಷೆಗಳಿಗೆ ಅನುತ್ತೀರ್ಣಗೊಂಡ ಮಕ್ಕಳು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಮನವೊಲಿಸಬೇಕು. ಅಲ್ಲದೆ, ಅನುತ್ತೀರ್ಣರಾದ ಮಕ್ಕಳು ಹಾಗೂ ಪಾಲಕರಿಗೆ ಶಿಬಿರ ನಡೆಸಿ, ನಿರಂತರವಾಗಿ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಪೂರಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ತುಂಬಬೇಕು ಎಂದು ಅವರು ಹೇಳಿದರು.
ಪ್ರತಿ ತಿಂಗಳು ನೋಡಲ್ ಅಧಿಕಾರಿಗಳ ಸಭೆ ನಡೆಸಿ ಎಸೆಸೆಲ್ಸಿ ಮಕ್ಕಳನ್ನು ಭೇಟಿ ಮಾಡಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಶೈಕ್ಷಣಿಕವಾಗಿ ಮಾರ್ಗದರ್ಶನ ನೀಡಿ ಮುಂಬರುವ ಸಾಲಿನ ಅಂದರೆ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯು ಮೊದಲ 10 ಸ್ಥಾನಗಳಲ್ಲಿ ಬರುವಂತೆ ಕ್ರಿಯಾ ಯೋಜನೆ ಮಾಡಿ ಅದರನ್ವಯ ಕಾರ್ಯ ಪ್ರವೃತ್ತರಾಗಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಒಟ್ಟು 97 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 25,059 ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ಒಟ್ಟು 18,924 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
ಜಿಲ್ಲೆಯ ಒಟ್ಟು ಫಲಿತಾಂಶ ಶೇ.75.45ರಷ್ಟು ಆಗಿದ್ದು ರಾಜ್ಯದಲ್ಲಿ 28ನೇ ಸ್ಥಾನದಲ್ಲಿದೆ. ಕಲಘಟಗಿ ತಾಲೂಕು ಶೇ 80.38 ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದರೆ, ಹುಬ್ಬಳ್ಳಿ ಶಹರ ವಲಯವು ಶೇ.64.24ರೊಂದಿಗೆ ಕೊನೆಯ ಸ್ಥಾನದಲ್ಲಿದೆ ಎಂದು ಹೇಳಿದರು.
ಗಣಿತ ವಿಷಯದಲ್ಲಿ ಶೇ.81.25ರಷ್ಟು, ಪ್ರಥಮ ಭಾಷೆಯಲ್ಲಿ ಶೇ.71.13 ರಷ್ಟು ಫಲಿತಾಂಶ ಬಂದಿದೆ. ಸರಕಾರಿ ಪ್ರೌಢಶಾಲೆಗಳಲ್ಲಿ ಶೇ.77.43 ರಷ್ಟು ಫಲಿತಾಂಶ ಬಂದಿದ್ದು, ಅನುದಾನ ರಹಿತ ಶಾಲೆಗಳಲ್ಲಿ ಶೇ.76.94 ರಷ್ಟು, ಅನುದಾನಿತ ಶಾಲೆಗಳಲ್ಲಿ ಶೇ.76.96 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಶಿಕ್ಷಣಾಧಿಕಾರಿ ಎಂ.ಎಲ್.ಹಂಚಾಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.