ಕೊಪ್ಪ: ಉಮಾ ಮಹೇಶ್ವರಿ ದೇವಾಲಯಕ್ಕೆ ದೇವೇಗೌಡ ಕುಟುಂಬ ಭೇಟಿ

Update: 2019-05-03 16:13 GMT

ಚಿಕ್ಕಮಗಳೂರು, ಮೇ 3: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬ ವರ್ಗದವರು ಶುಕ್ರವಾರ ಜಿಲ್ಲೆ ಕುಡ್ನಳ್ಳಿ ಗ್ರಾಮದಲ್ಲಿರುವ ಉಮಾಮಹೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದು, ಸಿಎಂ ಕುಟುಂಬದವರು ಹಾಗೂ ಕೆಲವೇ ಕೆಲವು ಸಿಎಂ ಆಪ್ತರ ಸಮ್ಮುಖದಲ್ಲಿ ದೇವಾಲಯದ ಆವರಣದಲ್ಲಿ ನಡೆದ ಹೋಮ, ಯಾಗದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಭಾಗಿಯಾಗಿದ್ದರು.

ಶುಕ್ರವಾರ ಮಧ್ಯಾಹ್ನದ ವೇಳೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಕುಡ್ನಳ್ಳಿ ಗ್ರಾಮಕ್ಕೆ ಆಗಮಿಸಿದ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಗ್ರಾಮದಲ್ಲಿರುವ ಉಮಾಮಹೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು. ಸಿಎಂ ಭೇಟಿ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಸರ್ಪಗಾವಲನ್ನು ನಿಯೋಜಿಸಲಾಗಿತ್ತು. ಸಿಎಂ ಭೇಟಿ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ದೇವಾಲಯದ ಸುತ್ತಮುತ್ತ 200 ಅಡಿ ದೂರದವರೆಗೆ ಪ್ರವೇಶ ನಿಷೇಧಿಸಿದ್ದರಿಂದ ದೇವಾಲಯದ ಮಾರ್ಗವಾಗಿ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಬೇಕಿದ್ದ ಗ್ರಾಮಸ್ಥರು ತೊಂದರೆ ಅನುಭವಿಸಿದರು. ದೇವಾಲಯದ ಎದುರಿನ ರಸ್ತೆಯ ಎರಡೂ ಬದಿಗಳಲ್ಲಿ ಪೊಲೀಸರು ನೆರೆದಿದ್ದ ಪರಿಣಾಮ ವಾಹನ ಸಂಚಾರ, ಸಾರ್ವಜನಿಕರ ಓಡಾಟವೂ ಬಂದ್ ಆಗಿತ್ತು. ಸಿಎಂ, ದೇವೇಗೌಡರನ್ನು ನೋಡಲು ಈ ವೇಳೆ ದೇವಾಲಯದ ಸಮೀಪದ ರಸ್ತೆಗಳಲ್ಲಿ ನೆರೆದಿದ್ದ ಜನರನ್ನು ದೂರಕ್ಕೆ ಕಳಸುತ್ತಿದ್ದ ದೃಶ್ಯಗಳು ಕಂಡುಬಂದವು. ಭದ್ರತೆ ನೆಪದಲ್ಲಿ ಪೊಲೀಸರು ತೊಂದರೆ ನೀಡಿದ್ದಕ್ಕೆ ಸಾರ್ವಜನಿಕರು, ಕುಮಾರಸ್ವಾಮಿ ಅಭಿಮಾನಿಗಳು ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು.

ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸಿಎಂ ಕುಮಾರಸ್ವಾಮಿ ದೇವಾಲಯದ ಮುಖ್ಯಸ್ಥ ಗಣೇಶ್ ಸೋಮಯಾಜಿ ಅವರೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು. ನಂತರ ಸಿಎಂ ಹಾಗೂ ಎಚ್.ಡಿ.ದೇವೇಗೌಡ ದೇವಾಲಯದ ಆವರಣದಲ್ಲಿ ನಡೆದ ಮಹಾರುದ್ರಯಾಗ ಹಾಗೂ ಗಣಪತಿ ಹೋಮದಲ್ಲಿ ಪಾಲ್ಗೊಂಡರು. ಹೋಮ, ಯಾಗ ಪೂರ್ಣಗೊಳ್ಳುವ ಮುನ್ನ ದೇವೇಗೌಡ ವಿಶ್ರಾಂತಿಗಾಗಿ ದೇವಾಲಯದಿಂದ ಹಿಂದಿರುಗಿದರು. ಸಿಎಂ ಕುಮಾರಸ್ವಾಮಿ ಹಾಗೂ ಕುಟುಂಬದವರು ಹೋಮ, ಯಾಗದಲ್ಲಿ ಪಾಲ್ಗೊಂಡರು. ಈ ವೇಳೆ ಕೆಲವೇ ಸ್ಥಳೀಯ ಜೆಡಿಎಸ್ ಮುಖಂಡರು, ಸಿಎಂ ಆಪ್ತರನ್ನು ದೇವಾಲಯದ ಒಳಗೆ ಬಿಡಲಾಗಿತ್ತು. ದೇವಾಲಯದ ಆವರಣದಲ್ಲಿ ನಾಳೆ ಪೂರ್ಣಹುತಿ ಯಾಗ ನಡೆಯಲಿದ್ದು, ಸಿಎಂ ಕುಟುಂಬದವರು ಈ ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News