ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನೆ ಬಡವಾಗುತ್ತಿದೆ: ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2019-05-03 17:13 GMT

ಪಾಂಡವಪುರ, ಮೇ 3: ಶೈಕ್ಷಣಿಕ ಮತ್ತು ಸಾಹಿತ್ಯದ ಕ್ಷೇತ್ರದಲ್ಲಿ ಸಂಶೋಧನೆ ಬಡವಾಗುತ್ತಿದೆ. ಪ್ರಾಧ್ಯಾಪಕರು ಸಹ ಇದರಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಇಂದಿನ ಯುವ ತಲೆಮಾರು ಸಂಶೋಧನೆಯತ್ತ ಮುಖಮಾಡುವ ಅನಿವಾರ್ಯತೆ ಇದೆ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ. 

ತಾಲೂಕು ಯುವ ಬರಹಗಾರರ ಬಳಗದ ವತಿಯಿಂದ ಪಟ್ಟಣದ ವಿಜಯ ಬಿ.ಇಡಿ. ಕಾಲೇಜಿನ ಸಭಾಂಗಣದಲ್ಲಿ ಕವಿ ಪುತಿನ ಸಂಸ್ಮರಣಾರ್ಥ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿ-ಕಾವ್ಯ ಸಮ್ಮಿಲನ, ಪುಸ್ತಕ ಬಿಡುಗಡೆ ಹಾಗೂ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಸಾಹಿತಿಗಳು ಸಾಮಾಜಿಕ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರ್ಥಮಾಡಿಕೊಂಡು, ಸಂಶೋಧನಾ ಮುಖಿಯಾಗಿ ಕೆಲಸ ಮಾಡಬೇಕಾಗಿದೆ. ಜಿಲ್ಲೆಯ ಯುವ ಸಾಹಿತಿಗಳು, ಬರಹಗಾರರು ಮಂಡ್ಯ ನೆಲದ ಬದುಕನ್ನು ಸಾಹಿತ್ಯ, ಸಂಸ್ಕೃತಿಯಲ್ಲಿ ಬಿಂಬಿಸಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತಿಕೆಯಿಂದ ಕೂಡಿದ್ದರೂ ಸಹ ಧಾರವಾಡ, ಶಿವಮೊಗ್ಗ, ಮೈಸೂರು, ಮಂಗಳೂರನ್ನು ಸಾಂಸ್ಕೃತಿಕವಾಗಿ ಗುರುತಿಸಿಲ್ಲ. ಈ ವಿಷಯದಲ್ಲಿ ವಿಮರ್ಶಕ ವಲಯ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದರು.

ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಯುವ ಕವಿ ಮಹೇಶ್ ಸೂರಮ್ಮನಹಳ್ಳಿ ಅವರ 'ಬಿಸಿಲ ಮಲ್ಲಿಗೆ’ ಕವನ ಸಂಕಲನ ಬಿಡುಗಡೆ ಮಾಡಿದರು. ಸಾಹಿತಿ ಡಾ.ಪ್ರದೀಪ್‍ಕುಮಾರ್ ಹೆಬ್ರಿ ಅವರಿಗೆ 2019ನೇ ಸಾಲಿನ 'ಪುತಿನ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು, ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ತಾಲೂಕು ಅಧ್ಯಕ್ಷ ಕ್ಯಾತನಹಳ್ಳಿ ರಂಗನಾಥ್, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಎನ್.ಕೆ. ಜಯಕುಮಾರ್, ಸುಜಾತ ಕೃಷ್ಣ, ಕೆ.ಅಂಬರೀಷ್ ಉಪಸ್ಥಿತರಿದ್ದರು. 

ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ. ರಾಮು ಸಮಾರೋಪ ಭಾಷಣ ಮಾಡಿದರು. ವಿವಿಧ ಕ್ಷೇತ್ರದ ಸಾಧಕರಿಗೆ 'ಕನ್ನಡ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕವಿಗೋಷ್ಠಿಯಲ್ಲಿ ಸುಮಾರು 74 ಮಂದಿ ಕವಿ-ಕವಯಿತ್ರಿಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News