ನಟಿ ಹರ್ಷಿಕಾ ಪೂಣಚ್ಚಗೆ ಕಿರುಕುಳ ಆರೋಪ: ಓರ್ವನ ಬಂಧನ

Update: 2019-05-03 17:20 GMT
ನಟಿ ಹರ್ಷಿಕಾ ಪೂಣಚ್ಚ

ಮಡಿಕೇರಿ, ಮೇ 3 : ಸ್ಯಾಂಡಲ್‍ವುಡ್ ನಟಿ, ಕೊಡಗಿನ ಹರ್ಷಿಕಾ ಪೂಣಚ್ಚ ಅವರಿಗೆ ಇಬ್ಬರು ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಈ ಕುರಿತು ಮತ್ತೋರ್ವ ನಟ ಕೊಡಗಿನ ಭುವನ್ ಪೊನ್ನಣ್ಣ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಕಿರುಕುಳ ನೀಡಿದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಬಿಪಿನ್ ದೇವಯ್ಯ ಎಂಬಾತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 

ಘಟನೆ ವಿವರ: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ, ಮೇ 2ರಂದು ಮಡಿಕೇರಿ ಹೊರವಲಯದ ಕಡಗದಾಳು ಸಮೀಪವಿರುವ ರೆಸಾರ್ಟ್‍ವೊಂದರಲ್ಲಿ ಮೇ 2 ರಂದು ಆಯೋಜಿಸಲಾಗಿದ್ದ, ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಹಾಗೂ ಬಿಪಿನ್ ದೇವಯ್ಯ ಅವರುಗಳು ರಾತ್ರಿ 11 ಗಂಟೆಯ ಸುಮಾರಿಗೆ ನಟಿ ಹರ್ಷಿಕಾ ಪೂಣಚ್ಚ ಅವರೊಂದಿಗೆ ವಿನಾಕಾರಣ ಕ್ಯಾತೆ ತೆಗೆದು ಮಾತಿಗೆ ಮಾತು ಬೆಳಸಿ, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭ ನಟ ಭುವನ್ ಕೂಡ ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ್ದಾರೆ. ನಂತರ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರುಗಳು ಮಡಿಕೇರಿ ಗ್ರಾಮಾಂತರ ಠಾಣೆಗೆ ಆಗಮಿಸಿ ಈ ಕುರಿತು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೇ 3 ರಂದು ಪ್ರಕರಣದ ಮೊದಲ ಆರೋಪಿ ಬನ್ಸಿ ನಾಣಯ್ಯನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News