×
Ad

ಕುಡಿಯುವ ನೀರಿನ ಸಮಸ್ಯೆ: ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಬಿಂದಿಗೆ ಹಿಡಿದು ಪ್ರತಿಭಟನೆ

Update: 2019-05-03 23:13 IST

ಮೈಸೂರು,ಮೇ.3: ಹಿನಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಖಾಲಿ ಬಿಂದಿಗೆ ಹಿಡಿದು ಜಮಾಯಿಸಿದ ಪ್ರತಿಭಟನಾಕಾರರು ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಗ್ರಾಮ ಪಂಚಾಯತ್ ಆಗಿದ್ದರೂ ಈ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಸರಬರಾಜು ಯೋಜನೆ ಇಲ್ಲ. ಪಂಚಾಯತ್ ವ್ಯಾಪ್ತಿಯಲ್ಲಿರುವ 28 ಬೋರ್ ವೆಲ್ ಗಳಲ್ಲಿ 25 ಬೋರ್ ವೆಲ್ ಗಳು ನೀರಿಲ್ಲದೇ ಬತ್ತಿವೆ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆ ಬಂದಿದೆ. ಕಾವೇರಿ, ಕಬಿನಿ ನದಿಗಳ ವಿವಿಧ ಬಹುಹಂತಗಳ ಕುಡಿಯುವ ನೀರಿನ ಸರಬರಾಜಿನ ಸೌಲಭ್ಯ ಮೈಸೂರು ನಗರಕ್ಕೆ ಲಭ್ಯವಿದ್ದರೂ ನಗರದ ಕೆಲವು ಬಡಾವಣೆಗಳಿಗೆ ನೀರನ್ನು ಒದಗಿಸುವ ಪೈಪ್ ಲೈನ್ ಗಳು ಇಲ್ಲಿಂದಲೇ ಹಾದು ಹೋದರೂ ಈ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ ಶಿಫಾರಸ್ಸಿನ ಅನ್ವಯ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿನಿತ್ಯದ ಬಳಕೆಗೆ 85 ಲೀಟರ್ ನಂತೆ 3500 ಜನರಿಗೆ ಸರಿಸುಮಾರು 30 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಅಷ್ಟು ನೀರನ್ನು ಪೂರೈಸುವಲ್ಲಿ ಗ್ರಾಮಪಂಚಾಯತ್ ವಿಫಲವಾಗಿದೆ ಎಂದು ದೂರಿದರು. ಕೆಲದಿನಗಳ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ಉನ್ನತಾಧಿಕಾರಿಗಳು ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎನ್ನುವ ಮೂಲಕ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನವೂ ವಾಣಿವಿಲಾಸ ನೀರು ಸರಬರಾಜು ಮಂಡಳಿಯಿಂದ ಹೆಚ್ಚುವರಿ ನೀರನ್ನು ಪೂರೈಸಿ, ಗ್ರಾಮದ ಅವಶ್ಯಕತೆಗೆ ತಕ್ಕಂತೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತ್ವರಿತಗತಿಯಲ್ಲಿ ಸ್ಥಾಪಿಸಿ, ನದಿಮೂಲದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ, ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ವ್ಯಾಪ್ತಿಗೆ ಹಿನಕಲ್ ಗ್ರಾಮ ಪಂಚಾಯತ್ ನ್ನು ಸೇರಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಉಮಾದೇವಿ, ವಿ.ಯಶೋಧರ್, ಕಾರ್ಯಕರ್ತರಾದ ಹರೀಶ್, ಸುನೀಲ್ ಟಿ.ಆರ್, ಸುಮ, ಆಕಾಶ್ ಕುಮಾರ್, ಕಲಾವತಿ, ಅಭಿಲಾಷ, ಅನೀಲ್, ಪುಟ್ಟರಾಜು, ಮುದ್ದುಕೃಷ್ಣ ಸೇರಿದಂತೆ ಹಲವು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News