×
Ad

ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ತುಮಕೂರು ಡಿಸಿ ಎಚ್ಚರಿಕೆ

Update: 2019-05-03 23:26 IST

ತುಮಕೂರು,ಮೇ.3: ತುಮಕೂರು ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಸಾಗಾಟ ಮಾಡುವ ಟ್ಯಾಕ್ಟರ್, ಟೆಂಪೋ, ಲಗೇಜು ಆಟೋಗಳು ಸೇರಿದಂತೆ ಸರಕು ವಾಹನಗಳನ್ನು ವಶಕ್ಕೆ ಪಡೆದು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ಅವರು ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕುಗಳನ್ನು ಹೊತ್ತೊಯ್ಯಬೇಕಾಗಿರುವ ಟೆಂಪೋ, ಲಗೇಜು ಆಟೋ, ಟ್ಯಾಕ್ಟರ್ ಗಳು ಜನರನ್ನು ಸಾಗಾಟ ಮಾಡುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.  ಜಿಲ್ಲೆಯಲ್ಲಿರುವ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರನ್ನು ಸಾಗಾಟ ಮಾಡುವ ಸರಕು ವಾಹನಗಳನ್ನು ವಶಕ್ಕೆ ಪಡೆದು ಸಾರಿಗೆ ಕಾಯ್ದೆ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡುವಂತೆ ಸಭೆಯಲ್ಲಿ ಹಾಜರಿದ್ದ ವಿವಿಧ ಪೊಲೀಸ್ ಠಾಣೆಗಳ ಇನ್‍ಪೆಕ್ಟರ್ ಗಳಿಗೆ ಅವರು ಸೂಚನೆ ನೀಡಿದರು.

ಸಂತೆ, ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಜನರನ್ನು ಸರಕು ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಾಟ ಮಾಡಲಾಗುತ್ತದೆ. ಅಲ್ಲದೆ ಗಾರ್ಮೆಂಟ್ಸ್ ಕಾರ್ಖಾನೆಗಳ ಉದ್ಯೋಗಿಗಳನ್ನು ಹಾಗೂ ಕಟ್ಟಡ ಕಾರ್ಮಿಕರು ಹಾಗೂ ಕೂಲಿಗಳನ್ನು ಸರಕು ಸಾಗಾಟ ವಾಹನಗಳಲ್ಲಿ ತುಂಬಿಕೊಂಡು ಪ್ರತಿ ನಿತ್ಯ ಸಂಚರಿಸುತ್ತಿವೆ. ಇಂತಹ ವಾಹನಗಳ ವಿರುದ್ಧ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶಾಲಾ ಮಕ್ಕಳನ್ನು ಕೂಡ ವಾಹನಗಳಲ್ಲಿ ಕುರಿಗಳ ರೀತಿ ತುಂಬಿಕೊಂಡು ಸಾಗುವ ದೃಶ್ಯಗಳು ಕಂಡುಬರುತ್ತಿವೆ. ಇಂತಹ ವಾಹನಗಳ ವಿರುದ್ಧ ಕ್ರಮಕೈಗೊಂಡು ವಾಹನಗಳ ಲೈಸನ್ಸ್ ರದ್ದು ಮಾಡಬೇಕು. ಈ ಬಗ್ಗೆ ಜಿಲ್ಲೆಯಲ್ಲಿರುವ ಶಾಲೆಗಳ ಆಡಳಿತ ಮಂಡಳಿಗೆ ಪತ್ರ ಬರೆದು ಮಕ್ಕಳ ಸುರಕ್ಷತೆಯ ಕುರಿತು ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರು ಶಿಕ್ಷಣ ಇಲಾಖೆ ಇವರಿಗೆ ಸೂಚನೆ ನೀಡಿದರು. 

ಸಾರ್ವಜನಿಕ ಸಾರಿಗೆ ಸೌಲಭ್ಯ ಇಲ್ಲದಿರುವ ಸ್ಥಳಗಳಲ್ಲಿ ಜನರು ಈ ಸರಕು ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಅಂತಹ ಸ್ಥಳಗಳಲ್ಲಿ ಕೆಎಸ್‍ಆರ್‍ಟಿಸಿ ವತಿಯಿಂದ ಬಸ್ಸುಗಳನ್ನು ಓಡಿಸುವಂತೆ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಗಾರ್ಮೆಂಟ್ಸ್, ಕಂಪನಿಗಳಿಗೆ ಹಾಗೂ ಕಟ್ಟಡ ನಿರ್ಮಾಣ ಕಂಟ್ರ್ಯಾಕ್ಟರ್ ಗಳಿಗೆ ಸೂಕ್ತ ನಿರ್ದೇಶನ ನೀಡಿ ಸರಕು ವಾಹನಗಳಲ್ಲಿ ಕಾರ್ಮಿಕರನ್ನು/ ಉದ್ಯೋಗಸ್ಥರು ಪ್ರಯಾಣಿಸದಂತೆ ಸೂಚಿಸುವಂತೆ ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ವಾಹನ ಚಲಾಯಿಸುವ ಅಪ್ರಾಪ್ತ ಸವಾರರನ್ನು ಪತ್ತೆ ಹಚ್ಚಿ ಆ ವಾಹನದ ಮಾಲಕರ ವಿರುದ್ಧ ಕೇಸು ದಾಖಲಿಸಿ, ಅಲ್ಲದೆ ವಾಹನದ ಆರ್.ಸಿ.ರದ್ದುಪಡಿಸಿ, ಮೊಬೈಲ್ ಬಳಸುವ ಸವಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ರಸ್ತೆ ನಿಯಮಗಳು, ರಸ್ತೆಯ ಸುರಕ್ಷತೆ, ರಸ್ತೆ ಗುಂಡಿಗಳು, ಸ್ಪೀಡ್ ಬ್ರೇಕ್ ಅಳವಡಿಕೆ, ಸೈನ್‍ಬೋರ್ಡ್, ರಸ್ತೆ ರಿಪೇರಿ ಸೇರಿದಂತೆ ರಸ್ತೆಯ ಸುರಕ್ಷತೆಯ ಸುಧಾರಣೆಗೆ ದೀರ್ಘಕಾಲೀನ ಹಾಗೂ ಅಲ್ಪಕಾಲೀನ ಕ್ರಿಯಾ ಯೋಜನೆ ರೂಪಿಸಿ ಬರುವ 15ರೊಳಗೆ ಸಲ್ಲಿಸುವಂತೆ ಪೊಲೀಸ್, ಶಿಕ್ಷಣ ಇಲಾಖೆ, ಮಹಾ ನಗರಪಾಲಿಕೆ, ಲೋಕೋಪಯೋಗಿ, ಕೇಶಿಪ್, ಪಿ.ಆರ್.ಇ.ಡಿ. ಸೇರಿದಂತೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಇಲಾಖೆಗಳು ಸಲ್ಲಿಸಬೇಕು ಎಂದರು. 

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಕೇರಳ ಮಾದರಿಯಲ್ಲಿ (ಪಿ.ಎಸ್.ಸಿ.) ವಿದ್ಯಾರ್ಥಿ ಮತ್ತು ಪೊಲೀಸರನ್ನು ಒಳಗೊಂಡ ತಂಡಗಳನ್ನು ರಚಿಸಿ ಸಾರಿಗೆ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು. ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ವಿಶೇಷ ಅಭಿಯಾನ ಆರಂಭಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತುಮಕೂರು ನಗರ ವಿಭಾಗದ ಡಿವೈಎಸ್‍ಪಿ ತಿಪ್ಪೇಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಪೊಲೀಸ್, ಶಿಕ್ಷಣ ಇಲಾಖೆ, ಪಾಲಿಕೆ, ರೈಲ್ವೆ ಇಲಾಖೆಯ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

65 ಲೈಸನ್ಸ್ ಗಳು ರದ್ದು
ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 121 ಪ್ರಕರಣಗಳ ಪೈಕಿ 65 ಪ್ರಕರಣಗಳಲ್ಲಿ ಲೈಸನ್ಸ್ ಗಳನ್ನು ರದ್ದುಗೊಳಿಸಲಾಗಿದೆ. ಬಾರ್/ ವೈನ್ಸ್ ಅಂಗಡಿಗಳಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸಿಕೊಂಡು ಬರುವವರ ಮೇಲೆ ನಿಗಾವಹಿಸಬೇಕು. ಅಲ್ಲದೆ ಹೆಚ್ಚು ವ್ಯಾಪಾರವಾಗುವ ಬಾರ್ ಗಳ ಮೇಲೂ ನಿಗಾವಹಿಸಿ ಈ ಬಗ್ಗೆ ವರದಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಅಬಕಾರಿ ಇಲಾಖೆಯ ಡಿಸಿ ಅವರಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News