×
Ad

ದುರ್ಬಲ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ: ಅಧಿಕಾರಿಗಳಿಗೆ ರಾಜ್‍ಕುಮಾರ್ ಖತ್ರಿ ಸ್ಪಷ್ಟ ಸೂಚನೆ

Update: 2019-05-03 23:48 IST

ಮಡಿಕೇರಿ, ಮೇ 3 : ಮುಂದಿನ ತಿಂಗಳಿನಿಂದ ಮಳೆಗಾಲ ಆರಂಭವಾಗುವುದರಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ದುರ್ಬಲ ಪ್ರದೇಶಗಳಿಗೆ 15 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ರಾಜ್‍ಕುಮಾರ್ ಖತ್ರಿ ತಿಳಿಸಿದ್ದಾರೆ.

2019ರ ಮುಂಗಾರು ಮಳೆಗೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಕಳೆದ ಸಾಲಿನ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಆಗಿರುವ ಪ್ರಗತಿ ಪರಿಶೀಲನೆ ಬಗ್ಗೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಖತ್ರಿ ಮಾತನಾಡಿದರು. ಮಳೆಗಾಲ ಆರಂಭದ ಕಾರಣದಿಂದ ಮೇ ಕೊನೆಯ ವಾರದಿಂದ ಕೊಡಗು ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‍ಡಿಆರ್‍ಎಫ್)ಯ ಒಂದು ತಂಡವನ್ನು ನಿಯೋಜಿಸುವಂತೆ ಕೇಂದ್ರ ಸರಕಾರವನ್ನು ಕೋರಲಾಗಿದೆ ಎಂದು ಅವರು ಹೇಳಿದರು.

ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಈಗಾಗಲೇ ಸರಕಾರದ ವತಿಯಿಂದ ಸೂಚನೆ ನೀಡಲಾಗಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ (ಕಾಲ್‍ಸೆಂಟರ್) ಆರಂಭಿಸಲಾಗುವುದು. ಜಿಲ್ಲೆಯಲ್ಲಿ 24 ಗಂಟೆಯೂ ಕಾರ್ಯ ನಿರ್ವಹಿಸುವ ತುರ್ತು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 1077 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದ ಅವರು, ತಾಲೂಕು ಮಟ್ಟದಲ್ಲೂ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಾಲ್ ಸೆಂಟರ್ ಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಂಬರುವ ಮುಂಗಾರು ಮಳೆಯಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಇಲಾಖಾವಾರು ವಹಿಸಬೇಕಾದ ಪಾತ್ರಗಳ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲೇ ಈ ಸಂಬಂಧ ತರಬೇತಿಯನ್ನೂ ನೀಡಲಾಗುವುದು. 

ಮೇ 25 ರೊಳಗೆ ಕಾಮಗಾರಿ ಪೂರ್ಣ

ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಮೂಲಕ ಹೆದ್ದಾರಿಗಳ ನಿರ್ಮಾಣ ಕಾರ್ಯಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೂ ಒತ್ತು ನೀಡಲು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಹೆದ್ದಾರಿಗಳಲ್ಲಿ ಈಗಾಗಲೇ 20 ಜೆಸಿಬಿಗಳನ್ನು ನಿಯೋಜಿಸಲಾಗಿದೆ. ಮರಗಳು ಬಿದ್ದಲ್ಲಿ ತುರ್ತಾಗಿ ತೆರವುಗೊಳಿಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ಕುಡಿಯುವ ನೀರು ಸರಬರಾಜು, ಚರಂಡಿಗಳ ಅಭಿವೃದ್ಧಿ ಮುಂತಾದ ಕಾಮಗಾರಿಗಳನ್ನು ಮೇ 25ರ ಒಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಮೇ 25ರ ಬಳಿಕ ಯಾವುದೇ ಕಾಮಗಾರಿಗಳು ಉಳಿಕೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಖತ್ರಿ ವಿವರಿಸಿದರು.

ಆರೋಗ್ಯ ಇಲಾಖೆಗೆ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೆರೆಯ ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಕಳೆದ ಮಳೆಗಾಲದಲ್ಲಿ ಭೂಕುಸಿತ ಉಂಟಾಗಿರುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ತಕ್ಷಣದಿಂದ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಸರಬರಾಜು ಮಾಡುವಂತೆ ನಿರ್ಮಿತಿ ಕೇಂದ್ರಕ್ಕೆ ನಿರ್ದೇಶನ ನೀಡಲಾಗಿದ್ದು, ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಸೂಚಿಸಲಾಗಿದೆ. ಮೇ ಮೂರನೇ ವಾರದಿಂದ ಸಾರ್ವಜನಿಕರಿಗೆ  ವಾಟ್ಸಾಪ್ ಗ್ರೂಪ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೂಲಕ ಅರಿವು ಮೂಡಿಸುವ ಕಾರ್ಯ ಆರಂಭವಾಗಲಿದ್ದು, ರಾಜ್ಯ ನೈಸರ್ಗಿಕ ವಿಕೋಪದ ಉಸ್ತುವಾರಿ ಕೇಂದ್ರದ ಮೂಲಕ ಪ್ರತೀ 15 ನಿಮಿಷಗಳಿಗೊಮ್ಮೆ ಹವಾಮಾನ ಪರಿಸ್ಥಿತಿಯ ಬಗ್ಗೆ ಎಸ್‍ಎಂಎಸ್ ಮೂಲಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದರು.

ವರುಣ ಮಿತ್ರ ಕಾಲ್‍ಸೆಂಟರ್ ಮೂಲಕ ದಿನದ 24 ಗಂಟೆಯೂ ರೈತರಿಗೆ ಹವಾಮಾನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದ ಅವರು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಅಗತ್ಯ ಮಾಹಿತಿಗೆ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದಾಗಿದೆ.

ಅಗ್ನಿಶಾಮಕ, ಗೃಹರಕ್ಷಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆಗಳನ್ನು ಅಗತ್ಯ ಸಾಮಾಗ್ರಿ, ಸಲಕರಣೆಗಳೊಂದಿಗೆ ಸನ್ನದ್ದರಾಗಿ ಪರಿಸ್ಥಿತಿ ಎದುರಿಸುವಂತೆ ಸೂಚನೆ ನೀಡಲಾಗಿದ್ದು, ನೈಸರ್ಗಿಕ ವಿಕೋಪದಿಂದ ಬಾಧಿತರಾಗುವ ವ್ಯಕ್ತಿಗಳಿಗೆ ತಂಗಲು ಪರಿಹಾರ ಕೇಂದ್ರ, ಪುನರ್ವಸತಿ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಕೆರೆ, ಕಾಲುವೆ, ಒಳಚರಂಡಿ ಇತ್ಯಾದಿಗಳನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ. ಬಿರುಗಾಳಿ, ಪ್ರವಾಹ ಇತ್ಯಾದಿಗಳಿಂದ ಹಾನಿಗೊಳಗಾಗುತ್ತಿರುವ ವಿದ್ಯುತ್ ಸಂಪರ್ಕಗಳನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಸೆಸ್ಕಾಂ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದೂ ಖತ್ರಿ ತಿಳಿಸಿದರು.

32 ಕೋಟಿ ರೂ. ಪರಿಹಾರ

ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೆ ಒಳಗಾದ 32,312 ರೈತರಿಗೆ ಇದುವರೆಗೆ 23 ಕೋಟಿ ರೂ.ಗಳ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಒದಗಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಪ್ರತೀ ಹೆಕ್ಟೇರ್ ಗೆ ತಲಾ 37,500 ರೂ.ಗಳಂತೆ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಒದಗಿಸಲಾಗಿದೆ. ದಾಖಲಾತಿಗಳು ಸರಿ ಇಲ್ಲದೆ 736 ರೈತರ ದಾಖಲಾತಿಗಳನ್ನು ಸಮರ್ಪಕ ಮಾಡುವಂತೆ ತಿಳಿಸಲಾಗಿದ್ದು, ದಾಖಲಾತಿಗಳು ಸರಿಯಾಗಿರುವ ಎಲ್ಲಾ ರೈತರ ಖಾತೆಗಳಿಗೆ ಶುಕ್ರವಾರ ಸಂಜೆಯೊಳಗೆ ಹಣ ಜಮಾ ಆಗಲಿದೆ ಎಂದು ವಿವರಿಸಿದರು.

ದಾಖಲಾತಿಗಳ ಸಮಸ್ಯೆ ಇರುವ ರೈತರು ಈಗಲೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಪಡೆದು ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಭೂಕುಸಿತ ಹಾಗೂ ಪ್ರವಾಹದಿಂದ ತಮ್ಮ ಜಮೀನುಗಳಲ್ಲಿ ಹೂಳು ತುಂಬಿದ್ದ ರೈತರಿಗೆ ಹೂಳೆತ್ತಲು ಹೆಕ್ಟೇರ್ ಗೆ ತಲಾ 12,250 ರೂ.ಗಳಂತೆ ಇದುವರೆಗೆ 352 ಮಂದಿಗೆ 22 ಲಕ್ಷ ರೂ.ಗಳನ್ನು ಒದಗಿಸಲಾಗಿದ್ದು, ತಮ್ಮ ಸಂಪೂರ್ಣ ಆಸ್ತಿ ಕಳೆದುಕೊಂಡಿರುವ 765 ಕುಟುಂಬಗಳಿಗೆ 1.75 ಕೋಟಿ ರೂ.ಗಳ ಪರಿಹಾರ  ನೀಡಲಾಗಿದೆ ಎಂದು ಖತ್ರಿ ಹೇಳಿದರು.

ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವುದಾಗಿ ಮೊದಲು ಹೆಸರು ನೋಂದಾಯಿಸಿಕೊಂಡ 417 ಕುಟುಂಬಗಳಿಗೆ ಮಾಸಿಕ 10 ಸಾವಿರ ರೂ.ಗಳ ಮನೆ ಬಾಡಿಗೆ ವಿತರಿಸಲಾಗುತ್ತಿದ್ದು, 83 ಮಂದಿ ಸ್ವತಃ ಮನೆ ಕಟ್ಟಿಕೊಳ್ಳುವುದಾಗಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 53 ಮಂದಿ ಮಾತ್ರ ಸೂಕ್ತ ದಾಖಲೆಗಳನ್ನು ನೀಡಿದ್ದು, ಅವರಿಗೆ ತಲಾ 2 ಲಕ್ಷ ರೂ.ಗಳಂತೆ ಪ್ರಥಮ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಮುಂದೆ ಹಂತಹಂತವಾಗಿ ಮೂರು ಕಂತುಗಳಲ್ಲಿ ಅವರಿಗೆ ಹಣ ನೀಡಲಾಗುವುದು ಎಂದು ತಿಳಿಸಿದರು.

ಹಾರಂಗಿ ಜಲಾಶಯದ ಹೂಳೆತ್ತುವ ಸಂಬಂಧ ನೀರಾವರಿ ನಿಗಮವು 130 ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಿದೆ. ಆದರೆ ಜಲಾಶಯದ ನೀರು ಸಂಪೂರ್ಣವಾಗಿ ಕಡಿಮೆಯಾಗದೆ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ ಎಂದು ಅವರು ಇದೇ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಟಿಯಲ್ಲಿ ಮೈಸೂರು ವಿಭಾಗದ ಆಯುಕ್ತ ಅನಿಲ್‍ಕುಮಾರ್, ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಉಮೇಶ್, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News