ಸಚಿವ ಸ್ಥಾನವನ್ನು ದುರುಪಯೋಗ ಮಾಡಿಲ್ಲ: ಸತೀಶ್ ಜಾರಕಿಹೊಳಿ

Update: 2019-05-04 14:20 GMT

ಬೆಳಗಾವಿ, ಮೇ 4: ‘ನಾನು ಎಂದೂ ಸಚಿವ ಸ್ಥಾನವನ್ನು ದುರುಪಯೋಗ ಮಾಡಿಲ್ಲ. ಸಚಿವರ ಕಾರಿಗೆ ಕೆಂಪುದೀಪ ತೆಗೆದು ಬಹಳ ದಿನವಾಗಿದೆ. ಶಾಸಕ ರಮೇಶ್ ಜಾರಕಿಹೊಳಿಗೆ ಕೆಂಪು ದೀಪ, ಅಧಿಕಾರದ ಬಗ್ಗೆ ಗೊತ್ತಿಲ್ಲ’ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಸೋದರನಿಗೆ ತಿರುಗೇಟು ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯತ್ನ ನಡೆಸಿದ್ದು, ಇದರಲ್ಲಿ ವಿಶೇಷವೇನಿಲ್ಲ. ಮೈತ್ರಿ ಸರಕಾರ ಎಂದ ಮೇಲೆ ಸಂಧಾನ ಮಾಡುವುದು ಸಹಜ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಬಂದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಪ್ರಯತ್ನಿಸಲಿದೆ. ಕಡಿಮೆ ಸ್ಥಾನಗಳನ್ನು ಗಳಿಸಿದರೆ ಆಪರೇಷನ್ ಕಮಲಕ್ಕೆ ಯತ್ನಿಸುವುದಿಲ್ಲ. ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಟೀಕಿಸಿದರು.

ಮೈತ್ರಿ ಧರ್ಮ ಪಾಲನೆ ಆಗಿಲ್ಲ: ಹಲವು ಕಡೆಯಲ್ಲಿ ಮೈತ್ರಿ ಧರ್ಮ ಪಾಲನೆ ಆಗಿಲ್ಲ. ಇದರಿಂದ ಮೈತ್ರಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವ ಸತೀಶ್ ಜಾಸರಕಿಹೊಳಿ ಹೇಳಿದರು.

ಕುಂದಗೋಳಕ್ಕೆ ಸಚಿವ ಡಿಕೆ ಶಿವಕುಮಾರ್ ಅವರಿಗೆ ಉಸ್ತುವಾರಿ ನೀಡಬೇಡಿ ಎಂದು ನಾನು ಎಲ್ಲೂ ಹೇಳಿಲ್ಲ. ಯಾರೇ ಉಸ್ತುವಾರಿ ಇದ್ದರೂ ಪಕ್ಷದ ಗೆಲುವು ಮುಖ್ಯ. ಡಿಕೆಶಿ ವಿರುದ್ಧ ನಾನು ಎಲ್ಲಿಯೂ ಅಸಮಾಧಾನ ಹೊರ ಹಾಕಿಲ್ಲ. ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗಳನ್ನು ಗೆಲ್ಲಲು ಸಿದ್ಧವಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News