ಉದ್ಯೋಗ ಖಾತರಿ ಯೋಜನೆ: ರಾಜ್ಯದಿಂದ ಮತ್ತೊಮ್ಮೆ 649.73 ಕೋಟಿ ರೂ ಮುಂಗಡ ಬಿಡುಗಡೆ

Update: 2019-05-04 14:48 GMT

ಬೆಂಗಳೂರು, ಮೇ 4: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರಕಾರ ಬಿಡುಗಡೆ ಮಾಡಬೇಕಾಗಿರುವ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತೊಮ್ಮೆ 649.73ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ.

ಇದರಿಂದಾಗಿ ರಾಜ್ಯವು ಒಟ್ಟು 1234.37 ಕೋಟಿ ರೂ ಮುಂಗಡ ಬಿಡುಗಡೆ ಮಾಡಿದಂತಾಗಿದೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ಇಂತಹ ಸಂದರ್ಭದಲ್ಲಿ ಜನ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ನೆರವಾಗುವ ಯೋಜನೆ ಉದ್ಯೋಗ ಖಾತರಿ ಯೋಜನೆಯಾಗಿದೆ ಎಂದು ತಿಳಿಸಲಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹಣವನ್ನು ಕೇಂದ್ರ ಸರಕಾರವೇ ಭರಿಸಬೇಕಿದೆ. ಆದರೆ ಕೇಂದ್ರ ಸರಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ, ರಾಜ್ಯ ಸರಕಾರವು ಗ್ರಾಮೀಣ ಜನರ ಹಿತದೃಷ್ಟಿಯಿಂದ ಮುಂಗಡವಾಗಿ ಕೂಲಿ ವೆಚ್ಚಕ್ಕಾಗಿ ಹಾಗೂ ಸಾಮಗ್ರಿ ವೆಚ್ಚಕ್ಕಾಗಿ ಈ ವರೆಗೆ 1273.96 ಕೋಟಿ ರೂ. ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ.

ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರವು 815.36 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಅದರಲ್ಲಿ 688.95 ಕೋಟಿ ರೂ.ಗಳನ್ನು ರಾಜ್ಯವು ಬಿಡುಗಡೆ ಮಾಡಿರುವ ಮುಂಗಡಕ್ಕೆ ಮರುಪಾವತಿಗೆ ಸರಿ ಹೊಂದಿಸುವಂತೆ ತಿಳಿಸಿದೆ. ಅಂದರೆ ಕೇಂದ್ರ ಸರಕಾರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇವಲ 166.02 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದಂತಾಗಿದೆ.

ಕೇಂದ್ರ ಸರಕಾರವು ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ರಾಜ್ಯ ಸರಕಾರ ಹೆಚ್ಚುವರಿ ಆರ್ಥಿಕ ಹೊರೆ ಅನುಭವಿಸುವಂತಾಗಿದ್ದು, ಕೇಂದ್ರ ಸರಕಾರವು ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡುವ ಅಗತ್ಯವಿದೆ ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News