ಕಾರಿನ ಗಾಜು ಪುಡಿಗೈದು 4.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಪಹರಣ

Update: 2019-05-04 17:08 GMT

ಶಿವಮೊಗ್ಗ, ಮೇ 4: ಲಾಕ್ ಮಾಡಿ ನಿಲ್ಲಿಸಿದ್ದ ಕಾರಿನ ಹಿಂಬದಿಯ ಗಾಜು ಪುಡಿಗೈದು ಕಾರಿನೊಳಗಿಡಲಾಗಿದ್ದ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ರೇಣುಕಾದೇವಿ ದೇವಾಲಯದ ಬಳಿ ನಡೆದಿದೆ. 

ಬೆಂಗಳೂರಿನ ಜಕ್ಕೂರಿನ ಜಿಕೆವಿಕೆ ಲೇಔಟ್ ನಿವಾಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ದಿಲೀಪ್‍ ಕುಮಾರ್ ಕುಟುಂಬ ಸಮೇತರಾಗಿ ಚಂದ್ರಗುತ್ತಿಯ ದೇವಾಲಯಕ್ಕೆ ಆಗಮಿಸಿದ್ದ ವೇಳೆ ಕಳ್ಳರು ಈ ಕೃತ್ಯ ನಡೆಸಿದ್ದಾರೆ. 

ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1.90 ಲಕ್ಷ ರೂ. ಮೌಲ್ಯದ 33 ಗ್ರಾಂ ತೂಕದ ಬಂಗಾರದ ಸರ, 24 ಗ್ರಾಂ ಕೊರಳ ಚೈನ್, 20 ಗ್ರಾಂನ ಒಂದು ಬಳೆ, 10 ಗ್ರಾಂನ 2 ಉಂಗುರಗಳು, 8 ಗ್ರಾಂನ ವಜ್ರದ ಹರಳಿರುವ ಉಂಗುರ, 8 ಗ್ರಾಂನ ರೂಬಿ ಹರಳಿನ ಉಂಗುರ, 2 ಜೊತೆ ಕಿವಿಯೊಲೆ, ಸ್ಯಾಮ್‍ಸಂಗ್ ಕಂಪೆನಿಗೆ ಸೇರಿದ ಮೊಬೈಲ್ ಪೋನ್ ಅಪಹರಿಸಲಾಗಿದೆ. ಕಳುವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 4.40 ಲಕ್ಷ ರೂ.ಗಳಾಗಿದೆ. 

ದಿಲೀಪ್‍ ಕುಮಾರ್ ರವರು ಕುಟುಂಬ ಸದಸ್ಯರೊಂದಿಗೆ ಚಂದ್ರಗುತ್ತಿ ದೇವಾಲಯಕ್ಕೆ ಆಗಮಿಸಿದ್ದರು. ಕಾರು ಲಾಕ್ ಮಾಡಿ ದೇವಾಲಯದೊಳಗೆ ತೆರಳಿದ್ದ ವೇಳೆ, ಕಾರಿನ ಹಿಂಭಾಗದ ಕಿಟಕಿ ಗಾಜು ಪುಡಿಗೈದು ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News