ನಿಖರವಾಗಿ 'ಫನಿ' ಜಾಡು ಹಿಡಿದ ಐದು ಭಾರತೀಯ ಉಪಗ್ರಹಗಳು

Update: 2019-05-05 04:13 GMT

ಚೆನ್ನೈ, ಮೇ 5: ವಾರದ ಹಿಂದೆ ಹಿಂದೂ ಮಹಾಸಾಗರದಲ್ಲಿ ಉಂಟಾದ ವಾಯುಭಾರ ಕುಸಿತವನ್ನು ಹವಾಮಾನ ತಜ್ಞರು ಗಮನಿಸಿದ್ದರು. ಐದು ಭಾರತೀಯ ಉಪಗ್ರಹಗಳು ಈ ಬಗ್ಗೆ ಹದ್ದಿನ ಕಣ್ಣಿಟ್ಟು ಇದು ತೀವ್ರ ಸ್ವರೂಪದ ಚಂಡಮಾರುತವಾಗಿ ಮಾರ್ಪಡುವ ಮುನ್ಸೂಚನೆ ನೀಡಿ, ಭಾರಿ ಅನಾಹುತ ತಡೆಯುವಲ್ಲಿ ಯಶಸ್ವಿಯಾಗಿವೆ.

 ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಡುತ್ತಿದ್ದಂತೆ, ಇಸ್ರೋ ಉಡಾಯಿಸಿದ ಈ ಐದು ಉಪಗ್ರಹಗಳು ಪ್ರತಿ 15 ನಿಮಿಷಗಳಿಗೊಮ್ಮೆ ಭೂಕೇಂದ್ರಕ್ಕೆ ಮಾಹಿತಿಗಳನ್ನು ರವಾನಿಸಿ, ಫನಿಯ ಜಾಡು ಹಿಡಿದು, ಮುನ್ಸೂಚನೆ ನೀಡಲು ಅನುವು ಮಾಡಿಕೊಟ್ಟಿರುವುದು ಮಾತ್ರವಲ್ಲದೇ ಸಾವಿರಾರು ಜೀವಗಳನ್ನು ರಕ್ಷಿಸಲು ನೆರವಾಗಿವೆ.

ಹವಾಮಾನ ಇಲಾಖೆಯ ಪ್ರಕಾರ, ಇನ್ಸಾಟ್-3ಡಿ, ಇನ್ಸಾಟ್-3ಡಿಆರ್, ಸ್ಕ್ಯಾಟ್‌ಸ್ಯಾಟ್-1, ಓಶನ್‌ಸ್ಯಾಟ್-2 ಮತ್ತು ಮೆಗಾ ಟ್ರೋಫಿಕ್ಸ್ ಉಪಗ್ರಹಗಳ ನೆರವಿನಿಂದ ಫನಿಯ ತೀವ್ರತೆ, ಸ್ಥಳ ಮತ್ತು ಅದರ ಸುತ್ತ ಆವರಿಸಿದ್ದ ಮೋಡದ ವಿವರಗಳನ್ನು ಅಧ್ಯಯನ ಮಾಡಲಾಗಿದೆ. ಚಂಡಮಾರುತವನ್ನು ಸೂಜಿಮೊನೆಯಷ್ಟು ನಿಖರವಾಗಿ ಅಂದಾಜಿಸಿದ ಭಾರತೀಯ ಹವಾಮಾನ ಇಲಾಖೆ ಕ್ರಮ ಜಾಗತಿಕ ಶ್ಲಾಘನೆಗೆ ಪಾತ್ರವಾಗಿದೆ.

ಸಾಮಾನ್ಯವಾಗಿ ಮಳೆ ಮೋಡಗಳು 100-200 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದರೂ, ಫನಿ ಸುತ್ತ ಸುಮಾರು 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೋಡದಟ್ಟಣೆ ಇದ್ದುದನ್ನು ಹವಾಮಾನ ತಜ್ಞರು ಗಮನಿಸಿದ್ದರು. ಉಳಿದ ಮೋಡ ಸುಮಾರು 10 ಸಾವಿರ ಅಡಿಯಷ್ಟು ಎತ್ತರದಲ್ಲಿತ್ತು.

"ಉಪಗ್ರಹಗಳು ಹವಾಮಾನ ಮುನ್ಸೂಚನೆಯಲ್ಲಿ ಅದರಲ್ಲೂ ಮುಖ್ಯವಾಗಿ ಚಂಡಮಾರುತದ ಮುನ್ಸೂಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ನಿಖರವಾಗಿ ಮುನ್ಸೂಚನೆ ನೀಡಲು ನೆರವಾಗುತ್ತವೆ" ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಕೆ.ಜೆ.ರಮೇಶ್ ಹೇಳಿದ್ದಾರೆ.

ಈ ನಿಖರ ಮುನ್ಸೂಚನೆಯಿಂದಾಗಿ ಚಂಡಮಾರುತ ಬೀಸುವ ರಾಜ್ಯಗಳ ಕರಾವಳಿ ಪ್ರದೇಶದ 11.5 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ದೊಡ್ಡ ಪ್ರಮಾಣದ ಸಾವು ನೋವು ತಪ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News