ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟ ಎಂದ ಮೋದಿಗೆ ರಾಹುಲ್ ತಿರುಗೇಟು

Update: 2019-05-05 08:53 GMT

  ಹೊಸದಿಲ್ಲಿ, ಮೇ 5: ‘‘ಮೋದಿಜೀ, ಯುದ್ಧ ಮುಗಿದಿದೆ. ನಿಮ್ಮ ಕರ್ಮವು ನಿಮಗಾಗಿ ಕಾಯುತ್ತಿದೆ. ನಿಮ್ಮ ಅಂತರಾಳ ನೀವೇನು ಎಂಬುದನ್ನು ತಿಳಿಸುತ್ತಿದೆ. ನಮ್ಮ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ. ಪ್ರೀತಿ ಹಾಗೂ ಅಪ್ಪುಗೆಯೊಂದಿಗೆ’’ ಎಂದು ಸಾತ್ವಿಕವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತನ್ನ ತಂದೆ ರಾಜೀವ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.

ಶನಿವಾರ ಉತ್ತರಪ್ರದೇಶದ ಲಕ್ನೋದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘‘ರಾಹುಲ್ ಗಾಂಧಿ ಅವರೇ, ನಿಮ್ಮ ತಂದೆ ರಾಜೀವ್ ಗಾಂಧಿಯವರ ಬದುಕು ನಂ.1 ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯೊಂದಿಗೆ ಅಂತ್ಯವಾಗಿತ್ತು’’ ಎಂದು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಪ್ರಧಾನಿ ಮೋದಿ ಮೇಲೆ ಕಿಡಿಕಾರಿದ್ದು, ‘‘ಹುತಾತ್ಮರ ಹೆಸರಲ್ಲಿ ಮತ ಕೇಳುವ ಈ ದೇಶದ ಪ್ರಧಾನಮಂತ್ರಿ ಹುತಾತ್ಮರಾದ ಮತ್ತೊಬ್ಬ ಮೇರು ವ್ಯಕ್ತಿಯ ಬಗ್ಗೆ ಅವಹೇಳನ ಮಾಡಿದ್ದಾರೆ. ಪ್ರಾಮಾಣಿಕ ಹಾಗೂ ಪರಿಶುದ್ದ ವ್ಯಕ್ತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನಿಮಗೆ ಅಮೇಠಿಯ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮೋದಿಯವರೇ ನೆನಪಿರಲಿ ಈ ದೇಶದ ಜನರು ವಂಚನೆಯನ್ನು ಸಹಿಸುವುದಿಲ್ಲ’’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲೂ ಕಟುಟೀಕೆಗಳು ವ್ಯಕ್ತವಾಗಿವೆ. ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವವರು ತಮ್ಮ ಸ್ಥಾನದ ಗೌರವ ಕಳೆಯುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಕೆಲವರು ಟೀಕಿಸಿದರೆ, ಕಾಂಗ್ರೆಸ್ ವಿರೋಧಿ ಹೇಳಿಕೆ ಹೊರತಾಗಿ ಕಳೆದ 5 ವರ್ಷಗಳಲ್ಲಿ ನಿಮ್ಮ ಸಾಧನೆ ಏನೆಂಬುದನ್ನು ಜನರಿಗೆ ತಿಳಿಸಿ ಎಂದು ಇನ್ನು ಕೆಲವರು ತಾಕೀತು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News