ಈಜಿಪ್ಟ್: 4,500 ವರ್ಷಗಳ ಹಿಂದಿನ ದಫನ ಭೂಮಿ ಪತ್ತೆ

Update: 2019-05-05 17:25 GMT

ಕೈರೋ (ಈಜಿಪ್ಟ್), ಮೇ 5: ಈಜಿಪ್ಟ್‌ನ ಪುರಾತತ್ವ ಸಚಿವಾಲಯವು ಶನಿವಾರ ಗಿಝಾ ಪಿರಮಿಡ್ಸ್ ಸಮೀಪ 4,500 ವರ್ಷಗಳಷ್ಟು ಹಳೆಯ ದಫನ ಭೂಮಿಯೊಂದನ್ನು ಅನಾವರಣಗೊಳಿಸಿದೆ. ಓಲ್ಡ್ ಕಿಂಗ್ ಡಮ್ ಕಾಲದ ಈ ದಫನ ಭೂಮಿಯಲ್ಲಿ ಬಣ್ಣ ಬಣ್ಣದ ಮರದ ಶವಪೆಟ್ಟಿಗೆಗಳು ಮತ್ತು ಕಲ್ಲಿನ ಮೂರ್ತಿಗಳಿವೆ.

ಗಿಝಾ ಪ್ರಸ್ಥಭೂಮಿಯ ಆಗ್ನೇಯ ಬದಿಯಲ್ಲಿರುವ ಈ ಸ್ಥಳದಲ್ಲಿ ವಿವಿಧ ಕಾಲಘಟ್ಟಗಳ ಗೋರಿಗಳು ಮತ್ತು ದಫನ ಭೂಮಿಗಳಿವೆ. ಆದರೆ, ಅವುಗಳ ಪೈಕಿ ಅತ್ಯಂತ ಪ್ರಾಚೀನವಾದುದು ಐದನೇ ರಾಜಮನೆತನದ (ಸುಮಾರು ಕ್ರಿಸ್ತಪೂರ್ವ 2,500) ಕಲ್ಲಿನ (ಲೈಮ್‌ಸ್ಟೋನ್) ಕುಟುಂಬ ಗೋರಿ ಎಂದು ಸಚಿವಾಲಯ ತಿಳಿಸಿದೆ.

ದಫನ ಭೂಮಿಯ ಗೋಡೆಗಳಲ್ಲಿ ಕೆತ್ತಿರುವ ಅಕ್ಷರಗಳು, ಮರದ ಶವಪೆಟ್ಟಿಗೆಗಳು ಹಾಗೂ ಪ್ರಾಣಿಗಳು ಮತ್ತು ಮಾನವರ ಶಿಲ್ಪಗಳನ್ನು ಎಎಫ್‌ಪಿ ಸುದ್ದಿ ಸಂಸ್ಥೆಯ ವರದಿಗಾರರೊಬ್ಬರು ನೋಡಿದ್ದಾರೆ.

ಈ ಗೋರಿಯು ಇಬ್ಬರಿಗೆ ಸೇರಿದೆ ಎಂದು ಸಚಿವಾಲಯ ಹೇಳಿದೆ. ಅವರೆಂದರೆ ಪುರೋಹಿತ ಮತ್ತು ನ್ಯಾಯಾಧೀಶ ಸೇರಿದಂತೆ ಏಳು ಹುದ್ದೆಗಳನ್ನು ಹೊಂದಿದ್ದರೆನ್ನಲಾದ ಬೆಹನುಯಿ-ಕ ಮತ್ತು ಗ್ರೇಟ್ ಸ್ಟೇಟ್‌ನ ಮುಖ್ಯಸ್ಥನೆನ್ನಲಾದ ನವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News