ನಾಯಿಗೆ ಥಳಿಸಿದಂತೆ ಥಳಿಸುತ್ತೇನೆ: ಬಿಜೆಪಿ ಅಭ್ಯರ್ಥಿಯಿಂದ ಬೆದರಿಕೆ

Update: 2019-05-05 17:38 GMT

ಕೋಲ್ಕೊತ್ತಾ, ಮೇ 5: ಮತದಾರರಿಗೆ ಬೆದರಿಕೆ ಒಡ್ಡಿದಲ್ಲಿ ಉತ್ತರಪ್ರದೇಶದಿಂದ ಸಾವಿರಾರು ಜನರನ್ನು ತಂದು ಮನೆಯಿಂದ ಹೊರಗೆಳೆದು ನಾಯಿಗೆ ಥಳಿಸಿದಂತೆ ಥಳಿಸಲಾಗುವುದು ಎಂದು ಪಶ್ಚಿಮಬಂಗಾಳದ ಘಟಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ತೃಣಮೂಲ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ತೃಣಮೂಲ ಪಕ್ಷದ ಇಬ್ಬರು ಕಾರ್ಯಕರ್ತರಿಗೆ ಘೋಷ್ ಎಚ್ಚರಿಕೆ ನೀಡುತ್ತಿರುವ ವೀಡಿಯೊ ವೈರಲ್ ಆಗಿದೆ.

ಮೇ 12ರಂದು ನಡೆಯುವ ಚುನಾವಣೆಯಲ್ಲಿ ಮತ ಹಾಕಬಾರದು ಎಂದು ತೃಣಮೂಲ ಪಕ್ಷದ ಕೆಲವು ಕಾರ್ಯಕರ್ತರು ಎಚ್ಚರಿಸಿದ್ದಾರೆ ಎಂದು ಕೆಲವರು ದೂರಿದ ಬಳಿಕ ಘಟಾಲ್‌ನ ಆನಂದಪುರ ಗ್ರಾಮದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಘೋಷ್ ಈ ಹೇಳಿಕೆ ನೀಡಿದ್ದಾರೆ.

‘‘ನೀವು ಮತ ಚಲಾಯಿಸಲು ಬಿಡುವುದಿಲ್ಲವೇ ? ಮತ ಚಲಾಯಿಸದಿರುವಂತೆ ನೀವು ಜನರಿಗೆ ಬೆದರಿಕೆ ಒಡ್ಡುತ್ತಿದ್ದೀರಾ?. ನಾನು ನಿಮ್ಮನ್ನು ಮನೆಯಿಂದ ಹೊರಗೆಳೆದು, ನಾಯಿಗೆ ಹೊಡೆದಂತೆ ಹೊಡೆಯುವೆ. ನಿಮಗೆ ಥಳಿಸಲು ನಾನು ಉತ್ತರಪ್ರದೇಶದಿಂದ ಸಾವಿರಾರು ಜನರನ್ನು ಕರೆ ತರಲಿದ್ದೇನೆ’’ ಎಂದು ಘೋಷ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ದಯವಿಟ್ಟು ನಾನು ಬಾಯಿ ತೆರೆಯುವಂತೆ ಒತ್ತಾಯಿಸಬೇಡಿ. ನೀವು ಜನರ ವಿರುದ್ಧ ತಪ್ಪಾಗಿ ಮಾತನಾಡುತ್ತಿದ್ದೀರಿ. ದಯವಿಟ್ಟು ಮಿತಿ ಮೀರಬೇಡಿ” ಎಂದಿದ್ದಾರೆ.

  ಘೋಷ್ ಹೇಳಿಕೆ ಬಗ್ಗೆ ಕ್ರಮಕೈಗೊಳ್ಳದ ಚುನಾವಣಾ ಆಯೋಗವನ್ನು ತೃಣಮೂಲ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥಾ ಚಟರ್ಜಿ ಪ್ರಶ್ನಿಸಿದ್ದಾರೆ. ‘‘ಭಾರತಿ ಘೋಷ್ ಜನರಿಗೆ ಬೆದರಿಕೆ ಒಡ್ಡಿದ್ದಾರೆ. ಉತ್ತರಪ್ರದೇಶದಿಂದ ಗೂಂಡಾಗಳನ್ನು ಕರೆತರುವುದಾಗಿ ಹೇಳಿದ್ದಾರೆ. ಅವರು ಲೋಕಸಭಾ ಚುನಾವಣೆಯ ಅಭ್ಯರ್ಥಿಯೇ ? ಅವರು ಮಾಜಿ ಐಪಿಎಸ್ ಅಧಿಕಾರಿಯೇ ? ನಾವು ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಿದ್ದೇವೆ ಹಾಗೂ ಚುನಾವಣಾ ಆಯೋಗವನ್ನು ಸಂಪರ್ಕಿಸಲಿದ್ದೇವೆ’’ ಎಂದು ಪಾರ್ಥಾ ಚಟರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News