×
Ad

ರಾಜ್ಯದ ಮೈತ್ರಿ ಸರಕಾರ ಸತ್ತು ಹೋಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

Update: 2019-05-06 17:45 IST

ಚಿಂಚೋಳಿ, ಮೇ 6: ರಾಜ್ಯದ ಮೂವತ್ತು ಜಿಲ್ಲೆಗಳ 176 ತಾಲೂಕುಗಳ ಪೈಕಿ 170ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಆವರಿಸಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆಯಿಂದ ಜನತೆ ಗುಳೆ ಹೋಗುತ್ತಿದ್ದಾರೆ. ಆದರೆ, ಬರ ಪರಿಹಾರ ಕಲ್ಪಿಸಬೇಕಾದ ಮೈತ್ರಿ ಸರಕಾರ ಸತ್ತು ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟೀಕಿಸಿದ್ದಾರೆ.

ಸೋಮವಾರ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಇವರಿಗೆ ಅಭಿವೃದ್ಧಿ ಬಗ್ಗೆ ಚಿಂತೆಯೇ ಇಲ್ಲ. ಸಚಿವ ಎಚ್.ಡಿ.ರೇವಣ್ಣ ತಮಗೆ ಸಂಬಂಧವಿಲ್ಲದ ಇಲಾಖೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ದೂರಿದರು.

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಹೆಚ್ಚಾಗಿರುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸುವ ಕಡತ ಕೇಂದ್ರ ಸರಕಾರದ ಬಳಿ ಇದೆ. ಲೋಕಸಭೆ ಚುನಾವಣೆ ಬಳಿಕ ಮೋದಿ ಅವರ ಮನವೊಲಿಸಿ ಕೋಲಿ ಸಮಾಜದ ಬೇಡಿಕೆ ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಅಲ್ಲದೆ, ಚಿಂಚೋಳಿ ಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದ ಅವರು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಗೆಲುವು ನಿಶ್ಚಿತ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಭಗವಂತ ಖೂಬಾ, ಸುನಿಲ್ ವಲ್ಯಾಪುರೆ, ಸುಭಾಷ್ ಗುತ್ತೇದಾರ, ಬಸನಗೌಡ ಪಾಟೀಲ ಯತ್ನಾಳ, ರಾಜೂಗೌಡ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News