×
Ad

ಮಡಿಕೇರಿ: ಗಮನ ಸೆಳೆದ ರೋಮಾಂಚನಕಾರಿ ಬೈಕ್, ಕಾರ್ ರೇಸ್‍

Update: 2019-05-06 18:15 IST

ಮಡಿಕೇರಿ, ಮೇ.5 : ಗದ್ದೆಯಲ್ಲಿ ಶರವೇಗದಲ್ಲಿ ನುಗ್ಗುತ್ತಿರುವ ಬೈಕ್‍ಗಳು.. ಎದೆ ಝಲ್ಲೆನ್ನಿಸುವಂತೆ ಸದ್ದು ಮಾಡುತ್ತಾ ಶರವೇಗದಲ್ಲಿ ಧೂಳೆಬ್ಬಿಸುತ್ತಾ ಕಾರುಗಳನ್ನು ಚಲಾಯಿಸುವ ಚಾಲಕರು.. ನೆಲದ ಮೇಲೆ ರಾಕೆಟ್‍ಗಳು ಓಡಾಡಿದಂತಹ ಅನುಭವ.. ಪ್ರೇಕ್ಷಕರಿಗೆ ಮೈ ಜುಮ್ಮೆನ್ನಿಸುವ ಅನುಭವದೊಂದಿಗೆ ಭರಪೂರ ಮನೋರಂಜನೆ.. ಇದು ಕಾಫಿನಾಡು ಕೊಡಗಿನಲ್ಲಿ ನಡೆದ ರೋಮಾಂಚನಕಾರಿ ಬೈಕ್ ಹಾಗು ಕಾರ್ ರೇಸ್‍ಗಳ ಚಿತ್ರಣ.. 

ವಿರಾಜಪೇಟೆ ತಾಲೂಕಿನ ಬೇಗೂರು ಗ್ರಾಮದ ಸಮೀಪ ಜೆಸಿಐ ಸಂಸ್ಥೆ ಆಯೋಜಿಸಿದ್ದ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ರೇಸ್ ಜುಗಲ್‍ಬಂಧಿ  ಸವಿಯಲು ಬಂದ ಪ್ರೇಕ್ಷಕರಿಗೆ ಮನೋರಂಜನೆ ಒದಗಿಸಿತು. ಈ ಸ್ಪರ್ಧೆಗಾಗಿಯೇ ದೊಡ್ಡದಾದ ಮೈದಾನದಲ್ಲಿ ಸಿದ್ದಗೊಂಡಿದ್ದ ವಿಶಿಷ್ಟ ಟ್ರ್ಯಾಕ್‍ನಲ್ಲಿ ವಾಹನ ಚಲಾಯಿಸಿದ ಸವಾರರು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದರು. 

ಅಂಕು ಡೊಂಕಾದ ಟ್ರ್ಯಾಕ್, ಕ್ಷಣ ಕ್ಷಣಕ್ಕೂ ಅಪಾಯ ತಂದೊಡ್ಡುವ ರೀತಿಯಲ್ಲಿದ್ದ ತಿರುವುಗಳು, ಈ ಸವಾಲನ್ನು ಮೆಟ್ಟಿನಿಂತು ಚಾಣಾಕ್ಷತೆಯಿಂದ ರಾಕೆಟ್ ವೇಗದಲ್ಲಿ ವಾಹನ ಚಲಾಯಿಸುವ ಸವಾರರು ಗೆಲುವಿನತ್ತ ಮುನ್ನುಗ್ಗುತ್ತಿದ್ದರು. ಟೂ ಸ್ಟ್ರೋಕ್, ಫೋರ್ ಸ್ಟ್ರೋಕ್, ಕೂರ್ಗ್ ಓಪನ್ ಕ್ಲಾಸ್ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಬೈಕ್ ರೇಸ್ ನಡೆದರೆ, 800ಸಿ.ಸಿ.ಯಿಂದ 2000ಸಿ.ಸಿ.ಯವರೆಗೂ ನಾಲ್ಕು ವಿಭಾಗಗಳಲ್ಲಿ ಕಾರ್ ರೇಸ್ ಕೂಡ ನಡೆಯಿತು. ಈ ರೋಮಾಂಚನಕಾರಿ ರೇಸ್ ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಮೈದಾನದಲ್ಲಿ ಹಾಜರಿದ್ದು, ರೇಸ್ ನೋಡಿ ಸಂತಸಪಟ್ಟರು.

ಕರ್ನಾಟಕದ ವಿವಿಧ ಭಾಗ ಸೇರಿದಂತೆ ಹೊರ ರಾಜ್ಯಗಳಿಂದಲೂ ಸ್ಪರ್ಧಿಗಳೂ ರೇಸ್‍ನಲ್ಲಿ ಭಾಗವಹಿಸಿದ್ದರು. ರೇಸ್‍ನಲ್ಲಿ ಮಹಿಳಾ ಸ್ಪರ್ಧಿಗಳು ಕೂಡ ಭಾಗವಹಿಸಿ ನಾವೂ ಯಾರಿಗೂ ಕಮ್ಮಿ ಇಲ್ಲವೆಂಬಂತೆ ವಾಹನ ಚಲಾಯಿಸಿ ನೋಡುಗರ ಗಮನಸೆಳೆದರು. ಸಾಹಸಮಯ ಕ್ರೀಡೆಗಳನ್ನು ಪ್ರೀತಿಸುವ ಕೊಡಗಿನ ಸ್ಪರ್ಧಿಗಳು ಕೂಡ ರೇಸ್‍ನಲ್ಲಿ ಭಾಗವಹಿಸಿ ತಮ್ಮ ಚಾಕಚಕ್ಯತೆ ತೋರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News