ಉಮೇಶ್ ಜಾಧವ್ ಹಣಕ್ಕಾಗಿ ಬಿಜೆಪಿಗೆ ಮಾರಾಟ ಮಾಡಿಕೊಂಡಿದ್ದಾರೆ: ಪರಮೇಶ್ವರ್

Update: 2019-05-06 14:35 GMT

ಕಲಬುರಗಿ, ಮೇ 6: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ ಮತಗಳನ್ನು ಡಾ.ಉಮೇಶ್ ಜಾಧವ್ 50 ಕೋಟಿ ರೂ.ಗಳಿಗೆ ಮಾರಾಟ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಚಿಂಚೋಳಿ ಕ್ಷೇತ್ರದ ಟೆಂಗಳಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವರಿಗೆ ತಾಯಿ ಸಮಾನ. ಉಮೇಶ್ ಜಾಧವ್ ಹಣಕ್ಕಾಗಿ ಬಿಜೆಪಿಗೆ ತನ್ನನ್ನು ಮಾರಾಟ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಜಾಧವ್ ಅವರನ್ನು ರಾಜಕೀಯವಾಗಿ ಬೆಳಕಿಗೆ ತಂದವರು ಧರಂ ಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ. ಆದರೆ, ಇದೀಗ ಅವರ ವಿರುದ್ಧ ಜಾಧವ್ ಸ್ಪರ್ಧಿಸಿದ್ದಾರೆ. ಇದೀಗ ಅವರ ಪುತ್ರ ಅವಿನಾಶ್ ಜಾಧವ್‌ಗೆ ಟಿಕೆಟ್ ಕೊಡಿಸುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಟೀಕಿಸಿದರು.

ಎರಡು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜಾಧವ್ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಇದೀಗ ಬಿಜೆಪಿಯಿಂದ ಹಣ ಪಡೆದು ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ನೀವು ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು ಎಂದು ಪರಮೇಶ್ವರ್ ಮನವಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡಿದೆ. ಆದರೆ, ಈ ಸರಕಾರವನ್ನು ಉರುಳಿಸಲು ಯಡಿಯೂರಪ್ಪ ಕುತಂತ್ರ ನಡೆಸುತ್ತಿದ್ದಾರೆ. ಆದರೆ, ಇವರೇನೇ ಮಾಡಿದರೂ ವೆೆುತ್ರಿ ಸರಕಾರ ಬೀಳುವುದಿಲ್ಲ ಎಂದು ಅವರು ನುಡಿದರು.

ಬೆನ್ನಿಗೆ ಚೂರಿ: ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಉಮೇಶ್ ಜಾಧವ್ ಅವರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ಅವರಿಗೆ ಪಕ್ಷ ಎಲ್ಲವನ್ನೂ ನೀಡಿತ್ತು. ಆದರೆ, ಅವರು ಪಕ್ಷಕ್ಕೆ ದ್ರೋಹ ಮಾಡಿದ್ದು, ಬೆನ್ನಿಗೆ ಚೂರಿ ಹಾಕಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.

ಚಿಂಚೋಳಿ ಕ್ಷೇತ್ರದ ಜನರಿಂದ ಆಯ್ಕೆಯಾದ ವ್ಯಕ್ತಿ ಅವರಿಗೆ ದ್ರೋಹ ಮಾಡಿದ್ದು, ಇಂತಹವರನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡದೆ, ಮನೆಗೆ ಕಳುಹಿಸುವ ಕೆಲಸವನ್ನು ಕ್ಷೇತ್ರದ ಜನತೆ ಈ ಬಾರಿ ಮಾಡಬೇಕು ಎಂದು ಈಶ್ವರ್ ಖಂಡ್ರೆ ಮನವಿ ಮಾಡಿದರು.

ಚಿಂಚೋಳಿ ಕ್ಷೇತ್ರದ ಉಮೇಶ್ ಜಾಧವ್ ಅವರು ಜನರ ಅಭಿವೃದ್ಧಿ ಹೆಸರಿನಲ್ಲಿ ಮತ ಪಡೆದು ಇದೀಗ ಮನೆಯನ್ನೆ ಬಿಟ್ಟು ಹೋಗಿದ್ದಾರೆ. ಇಂತಹ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕ್ಷೇತ್ರದ ಜನತೆ ಮಣೆ ಹಾಕಬಾರದು. ಇವರನ್ನು ಮನೆಗೆ ಕಳುಹಿಸಬೇಕು’

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News