ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧದ ಚೆಕ್‌ಬೌನ್ಸ್ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣ

Update: 2019-05-06 15:01 GMT
ಶಾಸಕ ಗೂಳಿಹಟ್ಟಿ ಶೇಖರ್

ಬೆಂಗಳೂರು, ಮೇ 6: ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಮಹಾಲಕ್ಷ್ಮಿ ಲೇಔಟ್ ಜನತಾ ಕೋ-ಆಪರೇಟಿವ್ ಬ್ಯಾಂಕ್ ಇಬ್ಬರೂ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮಾಡಿಕೊಂಡರು.

ಈ ವೇಳೆಯಲ್ಲಿ ಗೂಳಿಹಟ್ಟಿ ಶೇಖರ್ ಪರ ವಕೀಲರು ಕೋ-ಆಪರೇಟಿವ್ ಬ್ಯಾಂಕ್‌ಗೆ ಮೊದಲ ಹಂತವಾಗಿ 25 ಲಕ್ಷ ಡಿಡಿ ನೀಡಿದ್ದೇವೆ. ಉಳಿದ ಮೊತ್ತದ ಹಣಕ್ಕೆ ಮುಂಗಡ ಚೆಕ್ ನೀಡಿದ್ದೇವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದೇ ವೇಳೆ ಡಿಡಿಯನ್ನು ಗೂಳಿಹಟ್ಟಿ ಪರ ವಕೀಲರು ಬ್ಯಾಂಕ್ ಅಧಿಕಾರಿಗಳಿಗೆ ನೀಡಲು ಮುಂದಾದರು. ಆದರೆ, ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಅವರು ಡಿಡಿಯನ್ನು ತೆಗೆದುಕೊಂಡು ಪರಿಶೀಲನೆ ನಡೆಸಿ, ಇತ್ತೀಚೆಗೆ ನಕಲಿ ಡಿಡಿಗಳನ್ನು ಸೃಷ್ಟಿಸಲಾಗುತ್ತಿದೆ. ಹೀಗಾಗಿ, ಪರಿಶೀಲಿಸಿ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿ ಬಳಿಕ ಡಿಡಿಯನ್ನು ಬ್ಯಾಂಕ್ ಅಧಿಕಾರಿಗೆ ಹಸ್ತಾಂತರಿಸಿ ವಿಚಾರಣೆಯನ್ನು ಮುಂದೂಡಿದರು.

1.25 ಕೋಟಿ ರೂ.ಮೊತ್ತದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಜನತಾ ಕೋ ಆಪರೇಟಿವ್ ಸೊಸೈಟಿ ದೂರು ದಾಖಲಿಸಿತ್ತು. ಆದರೆ, ಇಂದು ಗೂಳಿಹಟ್ಟಿ ಅವರು ನ್ಯಾಯಪೀಠದ ಮುಂದೆ ಹಾಜರಾಗಿ ರಾಜಿ ಸಂಧಾನ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News