10 ನೇ ತರಗತಿಯ ಸಿಬಿಎಸ್‍ಇ ಫಲಿತಾಂಶ: ಹುಳಿಯಾರಿನ ಯಶಸ್ ರಾಜ್ಯಕ್ಕೆ ಟಾಪರ್

Update: 2019-05-07 03:57 GMT

ಹುಳಿಯಾರು, ಮೇ 6: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ನೇ ತರಗತಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳ್ಳೆಕಟ್ಟೆಯ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಡಿ.ಯಶಸ್ 500 ಕ್ಕೆ 498 ಅಂಕಗಳನ್ನು ಪಡೆದು ಚೆನ್ನೈ ದಕ್ಷಿಣ ವಲಯ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ಭಾಜನನಾಗಿದ್ದಾನೆ.

ಯಶಸ್ ಹುಳಿಯಾರು ಸಮೀಪದ ಕಾಯಿ ತಿಮ್ಮನಹಳ್ಳಿ ಗ್ರಾಮದ ವಿದ್ಯಾರ್ಥಿಯಾಗಿದ್ದು ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಈತ ಕೇಂದ್ರಕ್ಕೆ 38ನೇ ಯವನಾಗಿ ಹಾಗೂ ರಾಜ್ಯಕ್ಕೆ ಮೊದಲಿಗನಾಗಿ ಉತ್ತೀರ್ಣರಾಗಿದ್ದಾನೆ.

ಕೃಷಿ ಕುಟುಂಬದಿಂದ ಬಂದಿರುವ ಯಶಸ್ ಹುಳಿಯಾರು ಸಮೀಪದ ತಿಮ್ಮನಹಳ್ಳಿಯ ದೇವರಾಜು ಹಾಗೂ ನೇತ್ರಾವತಿ ದಂಪತಿಗಳ ಪುತ್ರ. ಒಂದರಿಂದ ನಾಲ್ಕನೇ ತರಗತಿಯವರೆಗೆ ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯಲ್ಲಿ ಓದಿರುವ ಯಶಸ್ 5 ನೇ ತರಗತಿಯಿಂದ 10 ತರಗತಿಯವರಿಗೆ ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಓದಿ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾನೆ.

ತಮ್ಮ ಮಗನ ಸಾಧನೆಯ ಬಗ್ಗೆ ಅತೀವ ಸಂತೋಷ ವ್ಯಕ್ತಪಡಿಸಿರುವ ಪೋಷಕರು ತಮ್ಮ ಮಗ ಶೇಕಡ 98 ರವರೆಗೂ ಅಂಕ ತೆಗೆಯಬಹುದು ಎಂದು ನಿರೀಕ್ಷಿಸಿದ್ದರಾದರೂ ರ‌್ಯಾಂಕ್ ನಿರೀಕ್ಷಿಸಿರಲಿಲ್ಲ. ನಮ್ಮ ಮಗ ರಾಜ್ಯಕ್ಕೆ ಪ್ರಥಮನಾಗಿರುವುದು ನಮಗೆ ಅತ್ಯಂತ ಸಂತೋಷವಾಗಿದೆ ಎಂದು ಪತ್ರಿಕೆಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ದೇವರಾಜು ಅವರು ತಿಮ್ಮನಹಳ್ಳಿಯಲ್ಲಿ ಕೃಷಿಕರಾಗಿದ್ದು ತೋಟ, ಜಮೀನು ನಿರ್ವಹಿಸುತ್ತಿದ್ದಾರೆ. ಆದರೆ ಇವರು ಕೂಡ ಮೂಲತಃ ಎಂಜಿನಿಯರಿಂಗ್ ಪದವೀಧರರಾಗಿದ್ದು ಮೈಸೂರಿನಲ್ಲಿ ಓದಿರುವ ಇವರು ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿಯ ಪದವೀಧರರಾಗಿದ್ದಾರೆ. ಕೃಷಿಯಲ್ಲಿ ತಮ್ಮ ಸಾಧನೆಯನ್ನು ಕಾಣಬೇಕೆಂಬ ಹಂಬಲದಿಂದ ತಮ್ಮ ಊರಾದ ತಿಮ್ಮನಹಳ್ಳಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ತಮ್ಮ ಮಗನ ಬಗ್ಗೆ ಮಾತನಾಡಿದ ತಾಯಿ ನೇತ್ರಾವತಿ, ತಿಮ್ಮನಹಳ್ಳಿಯಿಂದ ಸುಮಾರು 15 ಕಿಲೋಮೀಟರ್ ದೂರದ ಹುಳಿಯಾರಿಗೆ ಶಾಲೆಗೆ ತೆರಳಿ ಮನೆಗೆ ಬರುವಾಗ 5:30 ಆಗಿರುತ್ತಿತ್ತು. ನಂತರ ಒಂದು ಗಂಟೆ ಆಟದಲ್ಲಿ ತೊಡಗಿಕೊಳ್ಳುತ್ತಿದ್ದ ಆತ ನಂತರ ರಾತ್ರಿ 11 ರಿಂದ 12 ಗಂಟೆವರೆಗೂ ಓದುತ್ತಿದ್ದ. ನಿತ್ಯವೂ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದರಿಂದ ಪರೀಕ್ಷೆಯ ಆತಂಕವಿರಲಿಲ್ಲ. ಅಲ್ಲದೆ ಯಾವುದೇ ಟ್ಯೂಷನ್ ಗೆ ಆತ ಹೋಗಿರಲಿಲ್ಲ, ಸೇರಿಸಲು ಕೂಡ ಇಲ್ಲಿ ಅವಕಾಶವಿರಲಿಲ್ಲ. ಮುಂಚಿನಿಂದಲೂ ಆತ ಶಾಲೆಗೆ ಮೊದಲ ಸ್ಥಾನದಲ್ಲೇ ಇರುತ್ತಿದ್ದ. ಪ್ರತಿಯೊಂದು ಪರೀಕ್ಷೆಯಲ್ಲೂ ನೂರಕ್ಕೆ ನೂರು ಅಂಕ ನಿರೀಕ್ಷಿಸುತ್ತಿದ್ದ.  ಫುಟ್ಬಾಲ್, ಚೆಸ್, ಡ್ಯಾನ್ಸ್ ಹೀಗೆ ಎಲ್ಲದರಲ್ಲೂ ಆಸಕ್ತಿ ಹೊಂದಿದ್ದ ಈತನ ಬಗ್ಗೆ ನಾವು ಉತ್ತಮ ಫಲಿತಾಂಶದ ನಿರೀಕ್ಷೆ ಇಟ್ಟುಕೊಂಡಿದ್ದೆವು ಎಂದರು.

ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಬೇಡ: ಯಶಸ್

ನಾನು ಅಂದಿನ ಪಾಠ ಅಂದೇ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಪಾಠ ಮಾಡುವಾಗ ಅರ್ಥವಾಗದನ್ನು ಶಿಕ್ಷಕರಿಂದ ಕೇಳಿ ತಿಳಿದುಕೊಂಡು ಮನೆಗೆ ಹೋಗುತ್ತಿದ್ದೆ. ಶಿಕ್ಷಕರೂ ಕೂಡ ಸಾಮಾನ್ಯವಾಗಿ ಅರ್ಥವಾಗುವಂತೆ ಪಾಠ ಮಾಡುತ್ತಿದ್ದರೂ ಆದರೂ ನನಗೆ ಡೌಟ್ ಬಂದಾಗ ಪುನಃ ಕೇಳಿದರೆ ಕೋಪಿಸಿಕೊಳ್ಳದೆ ತಕ್ಷಣ ಅರ್ಥ ಮಾಡಿಸುತ್ತಿದ್ದರು. ತಂದೆ ತಾಯಿ ಕೂಡ ನಿತ್ಯ ಶಾಲೆಯಲ್ಲಿನ ನನ್ನ ಕಲಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಬಿಡುವಿನ ವೇಳೆ ಚೆಸ್ ಆಡುವುದರ ಮೂಲಕ ಮೈಂಡ್ ರಿಲ್ಯಾಕ್ಷ್ ಮಾಡಿಕೊಳ್ಳುತ್ತಿದ್ದೆ. ಹಾಗಾಗಿ ವಿದ್ಯಾರ್ಥಿಗಳು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆಯ ಸಮಯದಲ್ಲಿ ಓದುವುದು ಬಿಟ್ಟು ನಿತ್ಯ ಓದಬೇಕು. ಬಹುಮುಖ್ಯವಾಗಿ ತಂದೆತಾಯಿಯರು ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿ ವಹಿಸಬೇಕು. ಆಗ ಶಾಲೆ ಮತ್ತು ಮನೆಯಲ್ಲಿ ಕಲಿಕೆಯ ವಾತಾವರಣ ಸೃಷ್ಠಿಯಾಗಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ.

-ಯಶಸ್, ಸಿಬಿಎಸ್‍ಇ ಟಾಪರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News