ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ದಾರಿದ್ರ್ಯ ಗ್ಯಾರಂಟಿ: ಮಾಜಿ ಶಾಸಕ ಸೋಮಶೇಖರ್

Update: 2019-05-06 16:42 GMT

ಮೈಸೂರು,ಮೇ.6: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ದಾರಿದ್ರ್ಯ ಗ್ಯಾರಂಟಿ ಎಂದು ಮಾಜಿ ಶಾಸಕ ಸೋಮಶೇಖರ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಪುರಾಣ ಮಹಾಕಾವ್ಯಗಳಲ್ಲಿ ಉಲ್ಲೇಖವಾಗದ ಇಂತಹ ಮೌಡ್ಯವನ್ನು ಜನರಲ್ಲಿ ಬಿತ್ತುತ್ತಿರುವುದು ಅಕ್ಷಮ್ಯ. ಕಳೆದ ಹತ್ತು ಹದಿನೈದು ವರ್ಷಗಳಿಂದಲೂ ಇದೊಂದು ವ್ಯಾಪಾರ ತಂತ್ರವಾಗಿ ಬಳಸಲಾಗುತ್ತಿದ್ದು, ಈ ದಿನ ಖರೀದಿಸಿದ ಚಿನ್ನ ಎಲ್ಲಿಯಾದರೂ ಅಕ್ಷಯವಾಗಿದ್ದರೆ ಅವರಿಗೆ ನಾನು 10 ಲಕ್ಷ ರೂ.ಗಳನ್ನು ನೀಡುವೆ ಎಂದು ಸವಾಲೆಸೆದರು.

ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಅಕ್ಷಯವಾಗುವುದು ಎಂದು ಮುಗ್ಧ ಜನರನ್ನು ನಂಬಿಸಿ ವ್ಯಾಪಾರಿಗಳು ಮೋಸ ಮಾಡುತ್ತಿದ್ದಾರೆ. ಶೇ. 80ರಷ್ಟು ಕೆಳ ಮಧ್ಯಮ, ಮಧ್ಯಮ ವರ್ಗದವರು ಸಂಬಳದಿಂದ ಜೀವನ ಸಾಗಿಸುತ್ತಿದ್ದು. ಅಂತಹವರು ನಾಳೆ ಚಿನ್ನ ಖರೀದಿಸಲೇಬೇಕೆಂದು ಸಾಲ ಮಾಡುವರು. ಇದರಿಂದ ಬಡ್ಡಿ ಹೆಚ್ಚಾಗಿ ದರಿದ್ರ ಕಾಡುವುದೇ ಹೊರತು ಒಳಿತಾಗುವುದಿಲ್ಲ. ವಿದ್ಯಾವಂತರೇ ಇಂತಹ ಮೌಡ್ಯಾಚರಣೆಗೆ ಮುಂದಾಗಿರುವುದು ದೇಶದ ದೌರ್ಭಾಗ್ಯವೆಂದು ಖೇಧ ವ್ಯಕ್ತಪಡಿಸಿದರು.

ಹನ್ನೆರಡನೇ ಶತಮಾನದ ಕಾಯಕಯೋಗಿ ಬಸವೇಶ್ವರ ಜಯಂತಿಯಂದು ಈ ಗೊಡ್ಡು ಅಚರಣೆ ಮಾಡುತ್ತಿರುವುದು ತರವಲ್ಲ. ಆದ್ದರಿಂದ ಪ್ರತಿಯೊಬ್ಬರು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಮಾಡುವ ಅಗತ್ಯವಿದ್ದು ಯಾವುದೇ ಆಮಿಷಕ್ಕೊಳಗಾಗಿ ಚಿನ್ನ ಖರೀದಿಸಬೇಡಿ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಮಾಜಿ ಸದಸ್ಯ ಸುನೀಲ್, ಮುಖಂಡರಾದ ಡೈರಿ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News