ಕಳಸ: ಪಾದಚಾರಿಗಳ ಪಾಲಿಗೆ ಕಂಟಕವಾಗಿರುವ ಫುಟ್‌ಪಾತ್

Update: 2019-05-06 16:48 GMT

ಕಳಸ, ಮೇ 6: ಪಟ್ಟಣದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿರುವ ಫುಟ್‌ಪಾತ್ ಚಪ್ಪಡಿ ಕಲ್ಲುಗಳು ಅಲ್ಲಲ್ಲಿ ಮುರಿದು ಹೋಗಿದ್ದು, ಸಾರ್ವಜನಿಕರು ಹಾಗೂ ಮಕ್ಕಳ ಪ್ರಾಣಕ್ಕೆ ಮುಳುವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಳಸ ಮುಖ್ಯ ರಸ್ತೆಯ ಕಲಶೇಶ್ವರ ದೇವಸ್ಥಾನದಿಂದ ಅಂಬಾತೀರ್ಥದ ತಿರುವು ರಸ್ತೆವರೆಗೆ ಕಾಂಕ್ರಿಟ್ ರಸ್ತೆ ಹಾಗೂ ಡಾಂಬರ್ ರಸ್ತೆಯ ಎರಡೂ ಬದಿಗಳಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ, ಈ ಫುಟ್‌ಪಾತ್‌ಗೆ ಅಳವಡಿಸಿದ ಕಾಂಕ್ರಿಟ್‌ನ ಚಪ್ಪಡಿಗಳು ಅಲ್ಲಲ್ಲಿ ಮುರಿದು ಹೋಗಿ ಕಬ್ಬಣದ ರಾಡುಗಳು ಮೇಲೆದ್ದಿದ್ದು, ಇವುಗಳಿಗೆ ಎಡವಿ ಸಾರ್ವಜನಿಕರು, ಮಕ್ಕಳು, ವೃದ್ಧರು ಕೈಕಾಲಿಗೆ ಪೆಟ್ಟು ಮಾಡಿಕೊಳ್ಳುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಪಾದಚಾರಿಗಳಿಗೆ ಉಪಯೋಗವಾಗಬೇಕಾದ ಫುಟ್‌ಪಾತ್ ಅವರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

ಈ ರಸ್ತೆಯ ಬದಿಗಳಲ್ಲಿ ಸರಕಾರಿ ಕಚೇರಿಗಳು, ಆಸ್ಪತ್ರೆ, ಶಾಲಾ ಕಾಲೇಜುಗಳು ಅಂಗನವಾಡಿಗಳು ಇವೆ. ನಿತ್ಯ ನೂರಾರು ಜನ ಪಾದಚಾರಿಗಳು ಫುಟ್‌ಪಾತ್ ಮೇಲೆ ಸಂಚಾರ ಮಾಡುತ್ತಾರೆ. ಆದರೆ, ಈ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುವ ಅದೆಷ್ಟೋ ನಾಗರಿಕರು ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೆ ಅಂಗನವಾಡಿಗೆ ಹೋಗುವ ಮಗುವೊಂದು ಫುಟ್‌ಪಾತ್ ಅವ್ಯವಸ್ಥೆಯಿಂದ ಮುರಿದು ಹೋದ ಚಪ್ಪಡಿಗಳ ಒಳಗೆ ಕಾಲು ಸಿಕ್ಕಿ ಹಾಕಿಕೊಂಡ ಪರಿಣಾಮ ಆಸ್ಪತ್ರೆ ಸೇರಬೇಕಾಯಿತು. ಮಹಿಳೆಯೊಬ್ಬರು ನಡೆದುಕೊಂಡುಹೋಗು ವಾಗ ಕಾಂಕ್ರಿಟ್ ಚಪ್ಪಡಿಯ ರಾಡು ಕಾಲಿಗೆ ಸಿಕ್ಕಿ ಹಾಕಿಕೊಂಡು ಬಿದ್ದು ಗಾಯಗಳಾಗಿದ್ದ ಘಟನೆಯು ನಡೆದಿದೆ. ಕಳಸ ಸರಕಾರ ಆಸ್ಪತ್ರೆ ಸಮೀಪವೇ ವೃದ್ಧರೊಬ್ಬರು ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹೀಗೆ ಪಟ್ಟಣದ ಫುಟ್‌ಪಾತ್ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಮಕ್ಕಳು ಆಸ್ಪತ್ರೆ ಸೇರುತ್ತಿರುವ ಘಟನೆಗಳು ಪ್ರತಿದಿನ ನಡೆಯುತ್ತಿವೆಯಾದರೂ ಸಂಬಂಧಿಸಿದ ಇಲಾಖೆಯಾಗಲೀ ಅಥವಾ ಗುತ್ತಿಗೆದಾರನಾಗಲೀ ಇತ್ತ ಕಿಂಚಿತ್ ಗಮನ ನೀಡುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಕೂಡ ಫುಟ್‌ಪಾತ್ ಪರಿಶೀಲಿಸಿ ಅವ್ಯವಸ್ಥೆ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಥಳೀಯ ಇಂಜಿನಿಯರುಗಳಿಗೆ ಚಪ್ಪಡಿ ಸರಿಪಡಿಸಲು ಆದೇಶಿಸಿದ್ದು, ಕಳಪೆ ಕಾಮಗಾರಿಯ ವಿರದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

ಅಲ್ಲದೆ, 2018ರ ನವೆಂಬರ್ ತಿಂಗಳಿನಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲೂ ಮಕ್ಕಳು ಫುಟ್‌ಪಾತ್ ಸಮಸ್ಯೆಯ ಬಗ್ಗೆ ಗಮನ ಸೆಳೆದು ಸರಿಪಡಿಸುವಂತೆ ಕೇಳಿಕೊಂಡಿದ್ದರು. ಆದರೆ ಫುಟ್‌ಪಾತ್ ಮಾತ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News