×
Ad

ಮಡಿಕೇರಿ ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

Update: 2019-05-06 22:20 IST

ಮಡಿಕೇರಿ, ಮೇ 6 : ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಕುತೂಹಲದಿಂದ ಕಾಯುತ್ತಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ದಿಢೀರ್ ಬೆಳವಣಿಗೆಯೊಂದರಲ್ಲಿ ಮಡಿಕೇರಿ ಸಮೀಪದ ರೆಸಾರ್ಟ್‌ವೊಂದರಲ್ಲಿ ತಂಗುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದ್ದಾರೆ.

ಮೇ 5ರಂದೇ ಸಂಜೆ ರೆಸಾರ್ಟ್ ಪ್ರವೇಶಿಸಿರುವ ಸಿದ್ದು, ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ಇವರೊಂದಿಗೆ ಪುತ್ರ ಯತೀಂದ್ರ ಹಾಗೂ ಇತರ ಆತ್ಮೀಯರು ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಮೇ 7 ರಂದು ರೆಸಾರ್ಟ್‌ನಿಂದ ಹಿಂದಿರುಗಲಿದ್ದಾರೆ ಎಂದು ಬಲ್ಲ ಮೂಲಗಳು ದೃಢಪಡಿಸಿವೆ. ಮತ್ತೊಂದು ಮೂಲದ ಪ್ರಕಾರ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನವೇ ರೆಸಾರ್ಟ್ ಖಾಲಿ ಮಾಡಿದ್ದಾರೆ.

ಮೇ 23 ರಂದು ಪ್ರಕಟಗೊಳ್ಳುವ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರಕಾರದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಮತ್ತು ಮುಂದೆ ಕಾಂಗ್ರೆಸ್ ತೆಗೆದುಕೊಳ್ಳಬಹುದಾದ ನಿಲುವುಗಳ ಬಗ್ಗೆ ಸಿದ್ದು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಸಿದ್ದರಾಮಯ್ಯನವರು ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News