×
Ad

ಶಿವಮೊಗ್ಗ: ರಾ.ಹೆ. ಪಕ್ಕದಲ್ಲಿಯೇ ಎರಡು ಸಾವಿರಕ್ಕೂ ಅಧಿಕ ಮರಗಳ ಅಕ್ರಮ ಕಡಿತ

Update: 2019-05-06 22:25 IST

►ಸುಮಾರು 5 ಕೋಟಿ ರೂ.ಮೌಲ್ಯದ ಮರಗಳ ನಾಶ ►ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ, ಮೇ 6: ರಾಜ್ಯ ಸರಕಾರ ಹಾಗೂ ಜನತೆಯ ಗಮನ ಲೋಕಸಭೆ ಚುನಾವಣೆಯಲ್ಲಿರುವ ವೇಳೆ, ತಾಲೂಕಿನ ಚೋರಡಿ ಸಮೀಪದ ತುಪ್ಪೂರು ಬಳಿ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಸುಮಾರು 45 ಎಕರೆ ಪ್ರದೇಶದಲ್ಲಿನ ಖಾಸಗಿ ಅರಣ್ಯ ಭೂಮಿಯಲ್ಲಿದ್ದ ಸಾವಿರಾರು ಗಿಡಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿದೆ ಎಂದು ವೃಕ್ಷಲಕ್ಷ ಆಂದೋಲನ ಆರೋಪಿಸಿದೆ.

ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದೆ. ಅಕ್ರಮವಾಗಿ ಸಾವಿರಾರು ಮರಕಡಿತಲೆ ಮಾಡಿದ್ದರೂ ಸಂಬಂಧಿಸಿದವರ ವಿರುದ್ಧ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದೆ. ಈ ಬಗ್ಗೆ ತನಿಖೆ ನಡೆಸಿ, ಕಠಿಣ ಕ್ರಮಕೈಗೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದೆ.

ತುಪ್ಪೂರು ಸರ್ವೇ ನಂಬರ್ 56, 57, 58 ರಲ್ಲಿನ 45 ಎಕರೆ ಖಾಸಗಿ ಜಮೀನಿನಲ್ಲಿದ್ದ ಬೀಟೆ, ಮತ್ತಿ, ನಂದಿ, ಹೊನಾಲು, ಮಾವು, ಗೇರು, ಸಾಗುವಾನಿ, ಬಿದಿರು ಮುಂತಾದ ಜಾತಿಯ ಬೆಲೆಬಾಳುವ 2 ಸಾವಿರ ಕ್ಕೂ ಹೆಚ್ಚು ಮರಗಳನ್ನು ಖಾಸಗಿ ವ್ಯಕ್ತಿಗಳು ನಾಶ ಮಾಡಿದ್ದಾರೆ. ಬಲವಂತವಾಗಿ, ಗೂಂಡಾಗಿರಿ ಪ್ರದರ್ಶಿಸಿ ಕಟಾವು ಮಾಡಿದ್ದಾರೆ. ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಜಮೀನು ಮಾಲಕರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಸಾಗರ ಅರಣ್ಯ ವಿಭಾಗದ ಚೋರಡಿ ಅರಣ್ಯ ವಲಯದ ಪ್ರವಾಸಿ ಮಂದಿರ ಪಕ್ಕದಲೇ ಭಾರೀ ಅರಣ್ಯ ನಾಶ ನಡೆದಿದೆ. ಸುಮಾರು 2 ಸಾವಿರ ಮರಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ. ಇಡೀ ಪ್ರದೇಶ ಬಯಲು ಮಾಡಿ ಶುಂಠಿ ಬೆಳೆಸುವ ತಯಾರಿ ನಡೆಸಲಾಗಿದೆ. ಮರ ಕಡಿತಲೆಗೆ ಯಾವುದೇ ಪರವಾನಿಗೆ ತೆಗೆದುಕೊಂಡಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಅರಣ್ಯ ಇಲಾಖೆ ಅಕ್ರಮ ಮರ ಕಟಾವು ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿದೆ. ಮರ ಕಡಿತಲೆ ಮಾಡಿದವರಿಗೆ ಎಷ್ಟು ದಂಡ ವಿಧಿಸಿದೆ ಎಂಬುದರ ಮಾಹಿತಿಯೂ ಇಲ್ಲವಾಗಿದೆ. ಸುಮಾರು 5 ಕೋಟಿ ರೂ.ಮೌಲ್ಯದ ಮರಗಳ ನಾಶವಾಗಿದೆ. ಪರವಾನಿಗೆ ಪಡೆದಿಲ್ಲ. ಖಾಸಗಿ ಅರಣ್ಯ ಭೂಮಿ ವ್ಯಾಜ್ಯದಲ್ಲಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಶುಂಠಿ ಮಾಫಿಯಾ, ಮರ ಮಾಫಿಯಾ ವಿರುದ್ಧ ಕ್ರಮ ಜರುಗಿಸಬೇಕು ಸಂಘಟನೆ ಆಗ್ರಹಿಸಿದೆ. ವೃಕ್ಷ ಸಂರಕ್ಷಣಾ ಕಾಯ್ದೆ ಅರಣ್ಯ ಸಂರಕ್ಷಣಾ ಕಾಯಿದೆ, ಜೀವವೈವಿಧ್ಯ ಕಾಯ್ದೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ತಪ್ಪಿತಸ್ಥರ ವಿರುದ್ಧ ನೇರ ಕ್ರಮ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಅರಣ್ಯ ಜಮೀನು ಮಾಲಕರು ಅಗತ್ಯ ಫೋಟೊ ವಿಡಿಯೋ ಸಾಕ್ಷ್ಯ ಒದಗಿಸಿದ್ದಾರೆ. ಹಾಗೆ ದೂರು ಸಲ್ಲಿಸಿದ್ದಾರೆ.

ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಸಂಘಟನೆ ಪ್ರಮುಖರಾದ ಅನಂತ ಹೆಗಡೆ ಅಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಹನಿಯ ರವಿ, ಕೆ.ವೆಂಕಟೇಶ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News