ಸ್ಥಳೀಯ ಸಂಸ್ಥೆ ಚುನಾವಣೆ: ಜೆಡಿಎಸ್ ಜೊತೆ ಮೈತ್ರಿ ಕಷ್ಟ- ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್
ಶಿವಮೊಗ್ಗ, ಮೇ 6: ಜಿಲ್ಲೆಯ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿಗೆ ಇಚ್ಚಿಸಿದರೆ, ಆ ಪಕ್ಷಕ್ಕೆ ಒಂದು ಅಥವಾ ಎರಡು ಸ್ಥಾನ ಬಿಟ್ಟು ಕೊಡಬಹುದು. ಅದಕ್ಕಿಂತ ಹೆಚ್ಚಿನ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿದರೆ ಹೊಂದಾಣಿ ಸಾಧ್ಯತೆ ಕಷ್ಟವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸ್ಪಷ್ಟಪಡಿಸಿದೆ.
ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಸಿ.ಸಿ. ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಪಕ್ಷದ ಪ್ರಮುಖರ ಸಭೆ ನಡೆಯಿತು. ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಡಿ.ಸಿ.ಸಿ. ಅಧ್ಯಕ್ಷರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕ ಮಾಡಿಕೊಳ್ಳುವ ಕುರಿತಂತೆ, ಪಕ್ಷದ ಹಿರಿಯ ಮುಖಂಡರು ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಅದನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡಲಾಗುವುದು. ವರಿಷ್ಠರ ಸೂಚನೆಯಂತೆ ಮುನ್ನಡೆಯಲಾಗುವುದು ಎಂದರು.
ಶಿಕಾರಿಪುರ, ಹೊಸನಗರ, ಸಾಗರ, ಶಿರಾಳಕೊಪ್ಪ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಹಾಗಾಗಿ ಅಲ್ಲಿ ಜೆಡಿಎಸ್‍ಗೆ ಒಂದು ಅಥವಾ ಎರಡು ಸ್ಥಾನ ಬಿಟ್ಟು ಕೊಡಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಸ್ಥಾನ ಕೊಡಲು ಆಗುವುದಿಲ್ಲ. ಈ ಕುರಿತಂತೆ ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಲೋಕಸಭೆ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಹಾಘಟಬಂದನ್ ರಚನೆಯಾಗಿದ್ದರಿಂದ ರಾಜ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಾಗಿತ್ತು. ಆದರೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿರುವ ಹಿರಿಯ ಕಾರ್ಯಕರ್ತರಿಗೆ ಸ್ಪರ್ಧಿಸಲು ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಸ್ಥಾನ ಬಿಟ್ಟು ಕೊಡಲು ಆಗುವುದಿಲ್ಲ. ಆದರೆ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.