×
Ad

ತುಮಕೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2019-05-06 22:55 IST

ತುಮಕೂರು,ಮೇ 6: ಮೈತ್ರಿ ಸರಕಾರ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬಿಜೆಪಿ ವಿರುದ್ಧ ನಡೆಯುತ್ತಿರುವ ಸೇಡಿನ ಕ್ರಮದ ವಿರುದ್ಧ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಬಿಜೆಪಿ ವಿರುದ್ಧ ಸೇಡಿನ ಕ್ರಮ ತೆಗೆದುಕೊಳ್ಳುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಜ್ಯೋತಿಗಣೇಶ್, ಮಾತನಾಡಿ ಸಮ್ಮಿಶ್ರ ಸರಕಾರವನ್ನು ವಿರೋಧಿಸುವವರ ಧ್ವನಿ ಅಡಗಿಸುವ ಕೆಲಸಗಳು ನಡೆಯುತ್ತಿದ್ದರೂ, ಸಿಎಂ ಮೌನವಹಿಸಿರುವುದು ಅನುಮಾನವನ್ನು ಹುಟ್ಟುಹಾಕಿದ್ದು, ರಾಜ್ಯ ಸರಕಾರ  ರಾಜಕೀಯ ದ್ವೇಷವನ್ನು ಬಿಟ್ಟು ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವಂತೆ ಕರೆ ನೀಡಿದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಬಿಜೆಪಿ ದೂರು ನೀಡಿದ್ದರೂ ಈವರೆಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜೆಡಿಎಸ್ ಶಾಸಕರಾದ ನಾರಾಯಣಗೌಡ ಅವರು ಜನಪ್ರಿಯ ನಟರಾದ ಯಶ್ ಮತ್ತು ದರ್ಶನ್ ಅವರಿಗೆ ನೇರವಾಗಿ ಬೆದರಿಕೆ ಹಾಕಿದ್ದರು. ಈ ಎರಡೂ ಪ್ರಕರಣಗಳಲ್ಲಿ ಜನರ ನಡುವೆ ದ್ವೇಷದ ವಾತಾವರಣ ಮೂಡಿಸಿ ಸಾಮಾಜಿಕ ಸಾಮರಸ್ಯ ಕೆಡಿಸುವಂತಹ ಗಂಭೀರ ಅಪಾಯವಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರಕಾರ ಪಕ್ಷಪಾತಿ ಧೋರಣೆ ತೋರುತ್ತಿದೆ ಎಂದು ಅವರು ಅಪಾದಿಸಿದರು.

ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರವನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿ ಹಿತೈಷಿಗಳು ಮತ್ತು ಹಿರಿಯ ಪತ್ರಕರ್ತರನ್ನು ಕಾರಾಗೃಹಕ್ಕೆ ಕಳುಹಿಸಲು ಸ್ವತಃ ರಾಜ್ಯದ ಗೃಹ ಮಂತ್ರಿಗಳೇ ವಿಶೇಷ ಆಸಕ್ತಿ ವಹಿಸಿದ್ದರು ಎನ್ನುವ ಅತ್ಯಂತ ಗಂಭೀರ ಸಂಗತಿಯನ್ನು ನಾವು ನಿಮ್ಮ ಗಮನಕ್ಕೆ ತರಲೇಬೇಕಾಗಿದೆ. ಮಹೇಶ್ ವಿಕ್ರಮ್ ಹೆಗಡೆ, ಶ್ರುತಿ ಬೆಳ್ಳಕ್ಕಿ, ಶಾರದಾ ಡೈಮಂಡ್, ಹೇಮಂತ್‍ಕುಮಾರ್ ಮತ್ತು ಅಜಿತ್ ಶೆಟ್ಟಿ ಹೇರಂಜಿ ಅವರ ಮೇಲೆ ನಿರಾಧಾರವಾದ ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಕಿರುಕಳ ನೀಡಲಾಗಿದೆ. ಇವರೆಲ್ಲರೂ ಬಿಜೆಪಿ ಬಗ್ಗೆ ಅಭಿಮಾನ ಹೊಂದಿದವರು. ಅದೇ ಕಾರಣಕ್ಕೆ ಅಭಿವ್ಯಕ್ತಿ ಸ್ವಾತ್ರಂತ್ರ್ಯವನ್ನು ಹತ್ತಿಕ್ಕಿ ಇವರ ವಿರುದ್ಧ ಸೇಡಿನ ಕ್ರಮ ಜರುಗಿಸಲಾಗಿದೆ.

ಕೆಲವು ಪ್ರಕರಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 307ರ ಅನ್ವಯ ಪ್ರಕರಣ ದಾಖಲಾಗಿದ್ದರೂ ಕೇವಲ ಬಿಜೆಪಿ ಕಾರ್ಯಕರ್ತರನ್ನು ಮತ್ತು ಬಿಜೆಪಿ ಅಭಿಮಾನಿಗಳನ್ನು ಬಂಧಿಸಲಾಗಿದೆ. ರಾಜಕೀಯ ದ್ವೇಷದ ಕ್ರಮಕ್ಕೆ ರಾಜ್ಯ ಸರಕಾರವೇ ಮುಂದಾಗಿರುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಮಾಜಿ ಸಂಸದರಾದ ಜಿ.ಎಸ್. ಬಸವರಾಜ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ಬ್ಯಾಟರಂಗೇಗೌಡ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಸಿ.ಎನ್. ರಮೇಶ್, ಬಿಜೆಪಿ ನಗರ ಉಪಾಧ್ಯಕ್ಷ ಇಂದ್ರಕುಮಾರ್, ಕೊಪ್ಪಳ್ ನಾಗರಾಜ್, ವೇದಮೂರ್ತಿ, ಸೇರಿದಂತೆ ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News