ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದು ತಿರುಚಲ್ಪಟ್ಟ ವಿಡಿಯೋ ಎಂದ ಚುನಾವಣಾಧಿಕಾರಿ

Update: 2019-05-07 07:45 GMT

ಹೊಸದಿಲ್ಲಿ, ಮೇ 7: ಅಮೇಥಿಯ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ವಿರುದ್ಧ ಮತಗಟ್ಟೆ ವಶೀಕರಣ ಆರೋಪ ಹೊರಿಸಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಆರೋಪಗಳನ್ನು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಸ್ಮೃತಿ ಇರಾನಿ ಅವರ ದೂರು ಆಧಾರರಹಿತ ಹಾಗು ಸ್ಮೃತಿ ಪ್ರಸ್ತುತ ಪಡಿಸಿದ ವೀಡಿಯೋ ತಿರುಚಲ್ಪಟ್ಟಿದೆ ಎಂದಿದ್ದಾರೆ.

ಸೋಮವಾರ, ಐದನೇ ಹಂತದ ಚುನಾವಣೆಗೆ ಮತದಾನ ನಡೆಯುತ್ತಿರುವ ವೇಳೆ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದ ಸ್ಮೃತಿ ಇರಾನಿ, ಅಮೇಠಿಯ ಮತಗಟ್ಟೆಗೆ ಆಗಮಿಸಿ ಬಿಜೆಪಿ ಪರ  ಮತ ಚಲಾಯಿಸಲು ಬಯಸಿದ್ದ ವೃದ್ಧೆಯನ್ನು ಬಲವಂತವಾಗಿ ಕಾಂಗ್ರೆಸ್ ಪಕ್ಷಕೆ ಮತ ಚಲಾಯಿಸುವಂತೆ ಮಾಡಲಾಯಿತು ಎಂದು ಆರೋಪಿಸಿದ್ದರು.

“ಅವರು ನನ್ನ ಕೈ ಹಿಡಿದು ಕಾಂಗ್ರೆಸ್ ಚಿಹ್ನೆಯಿರುವ ಗುಂಡಿ ಒತ್ತುವಂತೆ ಮಾಡಿದರು,'' ಎಂದು ಮಹಿಳೆ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಂತರ ಸ್ಮೃತಿ ಇರಾನಿ ಆಗ್ರಹಿಸಿದ್ದರು. ಆದರೆ ಸ್ಮೃತಿ ಅವರ ಆರೋಪ ಆಧಾರರಹಿತ, ಆ ವೀಡಿಯೋ ತಿರುಚಲಾಗಿದೆ ಎಂದು ಚುನಾವಣಾ ಆಯೋಗ ವಿಚಾರಣೆಯ ನಂತರ ಹೇಳಿದೆ. ಈ ಬಗ್ಗೆ ತನಿಖೆ ನಡೆಸುವ ಸಂದರ್ಭ ಅಲ್ಲಿನ ಚುನಾವಣಾಧಿಕಾರಿಯನ್ನು ವಜಾಗೊಳಿಸಲಾಯಿತು ಎಂದು ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ವರ್ ಹೇಳಿದ್ದರು.

ಸೋಲುವ ಭಯದಿಂದ ಅನಗತ್ಯ ನೆಪಗಳನ್ನು ಸ್ಮೃತಿ ಇರಾನಿ ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News