ಮೋದಿ ಪ್ರಚಾರಕ್ಕೆ ಆಡಳಿತಯಂತ್ರದ ದುರುಪಯೋಗ ಆರೋಪ: ನೀತಿ ಆಯೋಗದಿಂದ ವರದಿ ಕೇಳಿದ ಚು.ಆಯೋಗ

Update: 2019-05-07 10:58 GMT

ಹೊಸದಿಲ್ಲಿ, ಮೇ 7: ನೀತಿ ಆಯೋಗವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಚುನಾವಣಾ ಉದ್ದೇಶಗಳಿಗೆ ದುರುಪಯೋಗ ಪಡಿಸುತ್ತಿದೆ ಎಂದು ಕಾಂಗ್ರೆಸ್ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ನೀತಿ ಆಯೋಗಕ್ಕೆ ಪತ್ರ ಬರೆದು ಪ್ರತಿಕ್ರಿಯೆ ಕೇಳಿದೆ.

ಕಳೆದ ಶನಿವಾರವೇ ನೀತಿ ಆಯೋಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಅವರಿಗೆ ಚುನಾವಣಾ ಆಯೋಗ ಪತ್ರ ಬರೆದಿದ್ದು, ತಕ್ಷಣ ಪ್ರತಿಕ್ರಿಯಿಸುವಂತೆ ಹೇಳಲಾಗಿದೆ. ಆದರೆ ಎಷ್ಟು ಸಮಯದೊಳಗೆ ಪ್ರತಿಕ್ರಿಯಿಸಬೇಕೆಂದು ಪತ್ರದಲ್ಲಿ ವಿವರಿಸಲಾಗಿಲ್ಲ.

ಪ್ರಧಾನಿಯ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಕಾರ್ಯಾಲಯವು ಆಡಳಿತ ಯಂತ್ರವನ್ನು ದುರುಪಯೋಗಪಡಿಸುತ್ತಿದೆ ಎಂದು ಮೇ 1ರಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.

ಪ್ರಧಾನಿ ವಿವಿಧ ಸ್ಥಳಗಳಿಗೆ ಪ್ರಚಾರ ನಿಮಿತ್ತ ತೆರಳುವ ಮುನ್ನ ಅಲ್ಲಿನ ಸ್ಥಳೀಯ ವಿಚಾರಗಳ ಕುರಿತಾದ ಮಾಹಿತಿಯನ್ನು ಒಂದು ದಿನದೊಳಗೆ  ಸಲ್ಲಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಪ್ರಧಾನಿ ಕಾರ್ಯಾಲಯ ನೀತಿ ಆಯೋಗಕ್ಕೆ ಸೂಚನೆ ನೀಡಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದರು.

ಪ್ರಧಾನಿಯ ರ್ಯಾಲಿಗಳಿಗಿಂತ ಮುನ್ನ ಮಹಾರಾಷ್ಟ್ರದ ಮೂರು ಜಿಲ್ಲೆಗಳ ಕಲೆಕ್ಟರ್ ಗಳಿಗೆ ನೀತಿ ಆಯೋಗ ಅಧಿಕಾರಿಗಳು ಪತ್ರ ಬರೆದಿದ್ದರೆಂದು scroll.in ಎಪ್ರಿಲ್ 10ರ ವರದಿಯಲ್ಲಿ ಹೇಳಿದ್ದನ್ನು ಕಾಂಗ್ರೆಸ್ ತನ್ನ ದೂರಿನಲ್ಲಿ ಉಲ್ಲೇಖಿಸಿತ್ತು. ಮಾರ್ಚ್ 31ರಂದು ಗೊಂಡಿಯಾ ಜಿಲ್ಲೆಯ ಕಲೆಕ್ಟರ್ ಕಾದಂಬರಿ ಬಲ್ಕವಾಡ್ ನೀತಿ ಆಯೋಗಕ್ಕೆ, “ಪ್ರಧಾನಿ ಕಾರ್ಯಾಲಯಕ್ಕೆ ಗೊಂಡಿಯಾ ಜಿಲ್ಲೆಯ  ಕುರಿತಾದ ಮಾಹಿತಿ'' ಎಂಬ ಶೀರ್ಷಿಕೆಯೊಂದಿಗೆ ವಿಸ್ತೃತ ವರದಿ ಸಲ್ಲಿಸಿದ್ದರು. ಲಾಥೂರ್ ಬಗ್ಗೆ ಅಲ್ಲಿನ ಕಲೆಕ್ಟರ್ ಸಲ್ಲಿಸಿದ ವರದಿಯಲ್ಲಿ ಅಲ್ಲಿನ ಇತಿಹಾಸ, ಪ್ರಮುಖ ಧಾರ್ಮಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಕುರಿತಾದ ಮಾಹಿತಿಯಿತ್ತು. ಅಂತೆಯೇ ವಾರ್ಧಾದ ಕುರಿತಾದ ವರದಿಯೂ ಇತ್ತು. ಮೋದಿ ವಾರ್ಧಾದಲ್ಲಿ ಎಪ್ರಿಲ್ 1ರಂದು, ಗೊಂಡಿಯಾದಲ್ಲಿ ಎಪ್ರಿಲ್ 3 ಹಾಗೂ ಲಾಟೂರ್ ನಲ್ಲಿ ಎಪ್ರಿಲ್ 9ರಂದು ಪ್ರಚಾರ ಕೈಗೊಂಡಿದ್ದರು.

ನೀತಿ ಆಯೋಗ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೂ ಇದೇ ರೀತಿ ಎಪ್ರಿಲ್ 8ರಂದು ಪತ್ರ ಬರೆದಿತ್ತೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News