ಈ ಗುರುದ್ವಾರದಲ್ಲಿ ಪ್ರತಿ ದಿನ ಇಫ್ತಾರ್ ಹಾಗು ನಮಾಝ್ ಗೆ ವ್ಯವಸ್ಥೆ

Update: 2019-05-07 18:26 GMT

ದುಬೈ, ಮೇ 7 : ಸೋಮವಾರ ಪವಿತ್ರ ರಮಝಾನ್‌ನ ಮೊದಲ ದಿನ ದುಬೈಯ ಮಸೀದಿಗಳಲ್ಲಿ ಮಗ್ರಿಬ್ ಪ್ರಾರ್ಥನೆಯ ಅಝಾನ್ ಪಠಿಸಿದ ಸಂದರ್ಭದಲ್ಲಿ ಅದೇ ಪ್ರಾರ್ಥನೆ ಇಲ್ಲಿನ ಗುರು ನಾನಕ್ ದರ್ಬಾರ್ ಗುರುದ್ವಾರದಲ್ಲೂ ಕೇಳಿಸಿತು.

ಈ ಗುರುದ್ವಾರದ ಸಮುದಾಯ ಅಡುಗೆ ಕೋಣೆಯ ಭವನದಲ್ಲಿ ಒಂದೆಡೆ ಸಿಖ್ಖರು ನೆಲದ ಮೇಲೆ ಕುಳಿತು ಉಚಿತ ಸಮುದಾಯ ಭೋಜನ ಲಂಗರ್ ಸೇವಿಸುತ್ತಿದ್ದರೆ ಅದೇ ಭವನದ ಇನ್ನೊಂದು ಭಾಗದಲ್ಲಿ ಮುಸ್ಲಿಮರು ತಮ್ಮ ಉಪವಾಸ ಕೊನೆಗೊಳಿಸುತ್ತಿದ್ದರು.

ಇವರೊಂದಿಗೆ ಉಪವಾಸ ಅಂತ್ಯಗೊಳಿಸಿದ ಬಾಂಗ್ಲಾದೇಶದ ಇಸ್ಲಾಮಿಕ್ ವಿದ್ವಾಂಸ ಹಾಫೀಝ್ ಅಬ್ದುಲ್ ಹಕ್ ನಂತರ ಅದೇ ಭವನದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಲಾಗಿದ್ದ ಪ್ರದೇಶದಲ್ಲಿ ನಮಾಝ್‌ನ ನೇತೃತ್ವ ವಹಿಸಿದರು.

ರಮಝಾನ್ ತಿಂಗಳಾದ್ಯಂತ ಮಗ್ರಿಬ್ ಪ್ರಾರ್ಥನೆಯನ್ನು ನಡೆಸಿಕೊಡಲು ಹಕ್ ಈಗಾಗಲೇ ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿ ಅನ್ಯ ಧರ್ಮಕ್ಕೆ ಸೇರಿದ ಪೂಜಾ ಸ್ಥಳದಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ಮುಸ್ಲಿಮರ ಜೊತೆ ಸಿಖ್ ದೇವಾಲಯದ ಮುಖ್ಯ ಗುರು ಕೂಡಾ ಭಾಗಿಯಾಗಿದ್ದರು.

ಸಹಿಷ್ಣುತೆಯ ವರ್ಷದಲ್ಲಿ ಈ ಗುರುದ್ವಾರ ಸಂಪೂರ್ಣ ರಮಝಾನ್ ಸಮಯದಲ್ಲಿ ಇಫ್ತಾರ್ ಆಯೋಜಿಸಿದೆ. ಧರ್ಮದ ಹಂಗಿಲ್ಲದೆ ಎಲ್ಲರಿಗೂ ದಿನದಲ್ಲಿ ಮೂರು ಬಾರಿ ಸಸ್ಯಾಹಾರಿ ಭೋಜನ ನೀಡುವ ಗುರುದ್ವಾರ ಕಳೆದ ಆರು ವರ್ಷಗಳಿಂದ ರಮಝಾನ್ ಸಮಯದಲ್ಲಿ ಅಂತರ್‌ ಧರ್ಮೀಯ ಇಫ್ತಾರ್ ಆಯೋಜಿಸುತ್ತಾ ಬಂದಿದೆ. ಆದರೆ ಈ ವರ್ಷ ಪ್ರತಿದಿನವೂ ಇಫ್ತಾರ್ ಆಯೋಜಿಸಲು ನಿರ್ಧರಿಸಲಾಗಿದೆ ಮತ್ತು ಅಂತರ್‌ ಧರ್ಮೀಯ ಇಫ್ತಾರ್ ವನ್ನು ಮೇ 15ರಂದು ಆಯೋಜಿಸಲಾಗುವುದು ಎಂದು ಗುರುದ್ವಾರದ ಮುಖ್ಯಸ್ಥ ಸುರೆಂದರ್ ಸಿಂಗ್ ಕಂದರಿ ತಿಳಿಸಿದ್ದಾರೆ.

ಪಾಕಿಸ್ತಾನದ ಕರಾಚಿ ಮೂಲದ ಅವೈಸ್ ಬೇಗ್ ಮತ್ತು ಕೇರಳದ ಮುಹಮ್ಮದ್ ಸಜೀರ್ ಇಡೀ ಜೀವನದಲ್ಲಿ ತಮ್ಮ ಧರ್ಮದ ಪೂಜಾ ಸ್ಥಳಗಳನ್ನು ಹೊರತುಪಡಿಸಿ ಅನ್ಯ ಧರ್ಮೀಯರ ಪೂಜಾ ಸ್ಥಳಗಳಿಗೆ ಭೇಟಿ ನೀಡಿದವರಲ್ಲ. ದುಬೈಯ ಹೋಟೆಲ್‌ನಲ್ಲಿ ಶೆಫ್ ಆಗಿರುವ ಬೇಗ್‌ನ ಗೆಳೆಯ ಮತ್ತು ಸಹೋದ್ಯೋಗಿ ಕುಲ್ದೀಪ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಗುರುದ್ವಾರದಲ್ಲಿ ಇಫ್ತಾರ್ ಬಗ್ಗೆ ಹಾಕಲಾಗಿದ್ದ ಪೋಸ್ಟನ್ನು ಕಂಡು ಬೇಗ್ ಅನ್ನು ಈ ಇಫ್ತಾರ್‌ಗೆ ಆಹ್ವಾನಿಸಿದ್ದರು. ಇಫ್ತಾರ್‌ಗೆ ತೆರಳಿದ ಬೇಗ್ , ಅಲ್ಲಿದ್ದ ಜನರ ಆಪ್ತತೆ ಮತ್ತು ಇಡೀ ಅನುಭವ ಖುಷಿ ನೀಡಿದೆ. ಇಲ್ಲಿರುವ ಭಾರತೀಯರು ಆತ್ಮೀಯವಾಗಿ ವರ್ತಿಸುತ್ತಾರೆ. ಈ ಅನುಭವ ಬಹಳ ಹೃದಯ ಸ್ಪರ್ಶಿಯಾಗಿತ್ತು ಎಂದು ಅವರು ಹೇಳುತ್ತಾರೆ.

ಇನ್ನು ಪಿಆರ್‌ಒ ಆಗಿರುವ ಸಜೀರ್‌ಗೆ ಈ ಸಂದರ್ಭ ಇತರ ಧರ್ಮದ ಬಗ್ಗೆ ತಿಳಿಯಲು ಒಂದು ಅವಕಾಶವಾಯಿತು. ನಾವು ಗುರುದ್ವಾರದ ಮೇಲಂತಸ್ತಿಗೆ ತೆರಳಿದೆವು. ಅದು ನಿಜವಾಗಿಯೂ ಅದ್ಭುತ. ವಿಭಿನ್ನ ಧರ್ಮದ ಜನರ ಮಧ್ಯೆ ಶಾಂತಿಯುತವಾಗಿ ಬಾಳುವ ಸಂದೇಶ ಸಾರುವ ಗುರುದ್ವಾರದ ಈ ನಿರ್ಧಾರ ನಿಜವಾಗಿಯೂ ಶ್ಲಾಘನೀಯ ಎಂದು ಸಜೀರ್ ಹೇಳುತ್ತಾರೆ.

ಗುರುದ್ವಾರಕ್ಕೆ ಆಗಮಿಸಿದ್ದ ಮೂವರು ಮಹಿಳೆಯರಲ್ಲಿ ಒಬ್ಬರಾಗಿದ್ದ ಶಹೀನಾ ತಾನು ಪ್ರಾರ್ಥನೆಯನ್ನು ಕೇಳುತ್ತಲೇ ಭಾವುಕಳಾದೆ ಎಂದು ಹೇಳುತ್ತಾರೆ. ಇದು ನಿಜವಾಗಿಯೂ ನಂಬಲಸಾಧ್ಯವಾದುದು. ನೀವು ಯಾವ ಜಾಗದಲ್ಲಿ ಕುಳಿತೂ ನಿಮ್ಮ ಧರ್ಮವನ್ನು ಆಚರಿಸಬಹುದು ಎನ್ನುವುದನ್ನು ಇದು ತೋರಿಸುತ್ತದೆ ಎಂದು ಅವರು ಅಭಿಪ್ರಾಯಿಸುತ್ತಾರೆ.

ಆರು ವಿವಿಧ ಖಾದ್ಯಗಳುಳ್ಳ ಲಂಗರ್ ಹೊರತಾಗಿ ಇಫ್ತಾರ್‌ಗೆ ಪ್ರತ್ಯೇಕವಾಗಿ ತಿಂಡಿ, ಹಣ್ಣುಗಳು ಮತ್ತು ಜ್ಯೂಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಗುರುದ್ವಾರದ ಪ್ರಧಾನ ವ್ಯವಸ್ಥಾಪಕ ಎಸ್.ಪಿ. ಸಿಂಗ್ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಇನ್ನಷ್ಟು ಜನರು, ಮುಖ್ಯವಾಗಿ ಕಾರ್ಮಿಕರು ಈ ಇಫ್ತಾರ್ ಭೋಜನ ಕೂಟದಲ್ಲಿ ಭಾಗಿಯಾಗಬಹುದು ಎಂದು ನಾವು ಭಾವಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News