×
Ad

63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೇ 9 ರಂದು ಅಧಿಸೂಚನೆ ಪ್ರಕಟ

Update: 2019-05-08 20:14 IST

ಬೆಂಗಳೂರು, ಮೇ 8: ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಮೇ 9 ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ಮೇ 16 ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿರುತ್ತದೆ.

ಅವಧಿ ಅಂತ್ಯಗೊಂಡಿರುವ 8 ನಗರಸಭೆಗಳು, 33 ಪುರಸಭೆಗಳು ಹಾಗೂ 22 ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಜತೆಗೆ, 10 ಕ್ಷೇತ್ರಗಳ ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳಿಗೆ, ಗ್ರಾಮ ಪಂಚಾಯತ್ ಗಳಲ್ಲಿ ತೆರವುಗೊಂಡಿರುವ 202 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ನಡೆಯಲಿದೆ.

ಮೇ 16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರುತ್ತದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 29 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೂ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯಕತೆಯಿದ್ದಲ್ಲಿ ಮೇ 30 ರಂದು ನಡೆಯಲಿದ್ದು, ಮೇ 31 ರಂದು ಬೆಳಗ್ಗೆ 8 ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಕಾಂಗ್ರೆಸ್, ಬಿಜೆಪಿ, ಸಿಪಿಎಂ, ಸಿಪಿಐ ಸೇರಿದಂತೆ 7 ರಾಷ್ಟ್ರೀಯ ಪಕ್ಷಗಳಿಗೆ, ಜೆಡಿಎಸ್ ರಾಜ್ಯ ಪಕ್ಷ ಹಾಗೂ ನೋಂದಾಯಿತ ಮಾನ್ಯತೆ ಪಡೆಯದ 80 ಪಕ್ಷಗಳು, ದೇಶದ ಇತರೆ ರಾಜ್ಯಗಳ 80 ಕ್ಕೂ ಅಧಿಕ ಪಕ್ಷಗಳಿಗೆ ಈಗಾಗಲೇ ನೀಡಿರುವ ಚಿಹ್ನೆಗಳನ್ನು ರಾಜ್ಯ ಚುನಾವಣಾ ಆಯೋಗ ಅಂಗೀಕರಿಸಿದೆ. ಇದರ ಜತೆಗೆ 164 ಮುಕ್ತ ಚಿಹ್ನೆಗಳನ್ನು ಕಾಯ್ದಿರಿಸಿದ್ದು, ಪಕ್ಷೇತರವಾಗಿ ನಾಮಪತ್ರ ಸಲ್ಲಿಸುವವರಿಗೆ ಮುಕ್ತ ಚಿಹ್ನೆಗಳನ್ನು ನಿಗದಿ ಮಾಡಲಾಗುತ್ತದೆ.

ಮೇ 2 ರಂದು ರಾಜ್ಯ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದರ ಹಿನ್ನೆಲೆಯಲ್ಲಿ ಅಂದಿನಿಂದಲೇ ಚುನಾವಣೆ ನಡೆಯಲಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಿಗೂ ಉಪ ಚುನಾವಣೆ ನಡೆಯಲಿದ್ದು, ಅದಕ್ಕೆ ಮೇ 13 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ.

ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ ಮಿತಿಯನ್ನು ನಿಗದಿ ಮಾಡಲಾಗಿದೆ. ಅದರಂತೆ ನಗರಸಭೆಗೆ ಸ್ಪರ್ಧಿಸುವವರು 2 ಲಕ್ಷ, ಪುರಸಭೆ ಒಂದೂವರೆ ಲಕ್ಷ ಹಾಗೂ ಪಟ್ಟಣ ಪಂಚಾಯತ್ ಗೆ ಸ್ಪರ್ಧಿಸುವ ಅಭ್ಯರ್ಥಿಗಳು ಒಂದು ಲಕ್ಷ ರೂ.ಗಳನ್ನು ಅಷ್ಟೇ ಖರ್ಚು ಮಾಡಬೇಕು ಎಂದು ಚುನಾವಣಾ ಆಯೋಗ ನಿರ್ದೇಶಿಸಿದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 1646 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 7.37 ಲಕ್ಷ ಪುರುಷರು ಹಾಗೂ 7.36 ಮಹಿಳೆಯರು, 181 ಇತರರು ಸೇರಿ 14.74 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟಾರೆ 8230 ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, 1998 ಮತಯಂತ್ರಗಳು ಹಾಗೂ ಕಂಟ್ರೋಲ್ ಯೂನಿಟ್‌ಗಳನ್ನು ಬಳಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News