ರಾಜ್ಯದಲ್ಲಿ ರಕ್ತದ ಕೊರತೆ ಎದುರಾಗುವ ಸಾಧ್ಯತೆ
ಬೆಂಗಳೂರು, ಮೇ 8: ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ಅದೇ ರೀತಿಯಲ್ಲಿಯೇ ರಕ್ತದ ಅಭಾವವೂ ಕಾಡುತ್ತಿದ್ದು, ವರ್ಷಕ್ಕೆ ಅಂದಾಜು 1.25 ಲಕ್ಷ ಯೂನಿಟ್ ರಕ್ತದ ಕೊರತೆ ಇದೆ ಎನ್ನಲಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷ 6 ಲಕ್ಷ ಯೂನಿಟ್‌ನಷ್ಟು ರಕ್ತದ ಅಗತ್ಯವಿದ್ದು, ದಿನನಿತ್ಯ 1,600 ಯೂನಿಟ್ ರಕ್ತಕ್ಕೆ ಬೇಡಿಕೆ ಬರುತ್ತಿದೆ. ಹಿಂದಿನ ವರ್ಷದಲ್ಲಿ 35,758 ಯೂನಿಟ್ ರಕ್ತ ಸಂಗ್ರಹವಾಗಿದೆ. ರೆಡ್‌ಕ್ರಾಸ್‌ನಿಂದ 22,500 ಯೂನಿಟ್, ಖಾಸಗಿ ರಕ್ತ ನಿಧಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಸಂಗ್ರಹ ಮಾಡಲಾಗುತ್ತಿದೆ.
ಡೆಂಗ್, ಚಿಕನ್ ಗುನ್ಯಾ, ಮಲೇರಿಯಾ, ಎಚ್1ಎನ್1 ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿರುವವರಿಗೆ ಪ್ಲೇಟ್‌ಲೆಟ್ ರಕ್ತ ಅಗತ್ಯ. ಈ ಹಿನ್ನೆಲೆಯಲ್ಲಿ ರಕ್ತಕ್ಕೆ ಬೇಡಿಕೆ ಅಧಿಕವಾಗುತ್ತಿದೆ. ಸರಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ. ಅವರಿಗೆ ಅಗತ್ಯಕ್ಕೆ ತಕ್ಕಂತೆ ರಕ್ತ ಸಿಗುತ್ತಿಲ್ಲ. ಅಲ್ಲದೆ, ಅಪಘಾತದಂತಹ ಭೀಕರ ಪ್ರಮಾದಗಳಲ್ಲಿ ಗಾಯಗೊಂಡವರಿಗೂ ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ರಕ್ತದಾನಕ್ಕೆ ಮನವಿ: ಅತ್ಯಂತ ತುರ್ತು ಸಂದರ್ಭದಲ್ಲಿ ಹತ್ತಿರದಲ್ಲಿರುವವರು ಕೂಡಲೇ ಸಂತ್ರಸ್ಥರಿಗೆ ರಕ್ತದಾನ ಮಾಡುವ ಮೂಲಕ ಪ್ರಾಣ ಉಳಿಸಲು ಮುಂದಾಗಬೇಕು. ಅಲ್ಲದೆ, ಆರೋಗ್ಯವಂತರಾಗಿರುವ ಎಲ್ಲರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿರಬೇಕು ಎಂದು ರೆಡ್‌ಕ್ರಾಸ್‌ನ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.