ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲಿ: ‘ಕೈ’ ಮುಖಂಡರಿಗೆ ಉಮೇಶ್ ಜಾಧವ್ ಸವಾಲು

Update: 2019-05-08 16:18 GMT

ಕಲಬುರಗಿ, ಮೇ 8: ‘ಹಣಕ್ಕಾಗಿ ಚಿಂಚೋಳಿ ಕ್ಷೇತ್ರದ ಮತದಾರರ ಆಶೀರ್ವಾದವನ್ನು ನಾನು ಮಾರಿಕೊಂಡಿದ್ದರೆ, ಯಾವುದೇ ಸಂಸ್ಥೆಯಿಂದ ತನಿಖೆ ಮಾಡಿಸಲಿ’ ಎಂದು ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ.

ಬುಧವಾರ ಜಿಲ್ಲೆಯ ಚಿಂಚೋಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮತನಾಡಿದ ಅವರು, ನಾನು ಎರಡನೆ ಬಾರಿ ಶಾಸಕನಾಗಿದ್ದು, ಕ್ಷೇತ್ರಕ್ಕೆ ಕರೆದರೂ ಯಾವೊಬ್ಬ ಮಂತ್ರಿಯೂ ಭೇಟಿ ನೀಡಲಿಲ್ಲ, ನನ್ನ ಕ್ಷೇತ್ರದಲ್ಲಿ ನಕ್ಸಲರು ಇದ್ದಾರೆಂಬ ಕಾರಣ ನೀಡಿ ಅಧಿಕಾರಿಗಳೂ ಬರಲಿಲ್ಲ. ಆಗ ಬರದಿದ್ದ ನಾಯಕರು ಈಗ ನನ್ನ ಕ್ಷೇತ್ರಕ್ಕೆ ಬಂದು ಅವರ ರಾಜಕೀಯ ಸಂಸ್ಕಾರ ತೋರಿಸುತ್ತಿದ್ದಾರೆಂದು ಟೀಕಿಸಿದರು.

‘ಇಂಜೆಕ್ಷೆನ್‌ಗೆ ನೀರು ಹಾಕುತ್ತಿದ್ದರೋ, ಔಷಧ ಹಾಕುತ್ತಿದ್ದರೋ’ ಎಂದು ಲೇವಡಿ ಮಾಡಿದ ಡಾ.ಪರಮೇಶ್ವರ್ ವೈದ್ಯ ವೃತ್ತಿಗೆ ಅಪಮಾನ ಮಾಡಿದ್ದಾರೆ. ನನ್ನ ಜೀವನದಲ್ಲಿ ಒಂದು ಕಳಂಕ ಇಲ್ಲ. ವೈದ್ಯ ಹುದ್ದೆಗೆ ರಾಜೀನಾಮೆ ನೀಡಿ ಬರುವ ವೇಳೆ 200 ಮಂದಿ ನನ್ನ ಸಹದ್ಯೋಗಿಗಳು ಕಣ್ಣೀರಿಟ್ಟಿದ್ದರು. ಕೀಳುಮಟ್ಟದ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.

ನಾನು ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೂ ಅದಕ್ಕೆ ಸಿದ್ಧ. 78 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಕಡಿಮೆ ಕ್ಷೇತ್ರ ಗೆದ್ದ ಜೆಡಿಎಸ್‌ಗೆ ಕಾಂಗ್ರೆಸ್ ಮಾರಾಟವಾಗಿದೆ ಎಂದು ದೂರಿದ ಅವರು, ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಮತದಾರರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದು, ಇದರಲ್ಲಿ ಸಫಲರಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ಒಡೆಯುವ ಕೆಲಸ: ಕುಂಚಾವರಂನಲ್ಲಿ ಯಾವುದೇ ಮಕ್ಕಳ ಮಾರಾಟವಾಗುತ್ತಿಲ್ಲ. ಇದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದ ಅವರು, ಕ್ಷೇತ್ರದಲ್ಲಿ ಒಗ್ಗಟ್ಟಾಗಿದ್ದ ಬಂಜಾರ ಸಮುದಾಯವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಜಾಧವ್ ಆರೋಪಿಸಿದರು.

ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದರೆ ನಾನು ಸಾಯುವ ವರೆಗೆ ಕಾಂಗ್ರೆಸ್ ಪಕ್ಷಕ್ಕೆ ಗುಲಾಮನಾಗಿರುತ್ತಿದ್ದೆ. ಆದರೆ, ಕೀಳು ರಾಜಕೀಯದಿಂದ ನನ್ನ ಕ್ಷೇತ್ರಕ್ಕೆ ಬರಬೇಕಾಗಿದ್ದ ಕಾರ್ಖಾನೆ ಬೇರೆ ಕಡೆಗೆ ವರ್ಗಾವಣೆಯಾಯಿತು ಎಂದ ಅವರು, ಶ್ರೀಮಂತ ದಲಿತ ನಾಯಕ ಖರ್ಗೆ, 50ಸಾವಿರ ಕೋಟಿ ರೂ.ಒಡೆಯ ಎಂದು ದೂರಿದರು.

ಪುತ್ರಿ ಅನುತ್ತೀರ್ಣಕ್ಕೆ ‘ಕೈ’ ಕಾರಣ

‘ನಾನು ಹಣ ತಗೆದುಕೊಂಡಿದ್ದೇನೆಂದು ನನ್ನ ವಿರುದ್ದ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಇದರಿಂದ ನನ್ನ ಮಗಳಿಗೆ ಅವಮಾನ ಆಗಿದೆ. ಉತ್ತಮವಾಗಿ ಓದುತ್ತಿದ್ದ ಆಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತಿರ್ಣರಾಗಿದ್ದಾಳೆ.’

-ಉಮೇಶ್ ಜಾಧವ್, ಕಲಬುರಗಿ ಬಿಜೆಪಿ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News