ಗುಂಡ್ಲುಪೇಟೆ: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Update: 2019-05-08 16:31 GMT

ಚಾಮರಾಜನಗರ, ಮೇ 08: ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳ ಮನೆ ಹಾಗೂ ತೋಟ ಇತರೆ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಕಣ್ಣೇಗಾಲ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದರು. ಇದೇ ವೇಳೆ ಮರ ಉರುಳಿ ಶಾಲಾ ಕಾಂಪೌಂಡಿಗೆ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

ಬೇರಂಬಾಡಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ಗಾಳಿಯಿಂದ ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿದರು. ಇದೇ ವೇಳೆ ಗಾಳಿಯಿಂದ ಮನೆಯ ಜಿಂಕ್‍ಶೀಟ್ ಹಾರಿದ ಪರಿಣಾಮ ಗಾಯಗೊಂಡ ಬಾಲಕನ ಆರೋಗ್ಯವನ್ನು ವಿಚಾರಿಸಿದರು. ಇದೇ ಸಮಯದಲ್ಲಿ ವೈದ್ಯರಿಗೆ ಕರೆ ಮಾಡಿದ ಜಿಲ್ಲಾಧಿಕಾರಿ ಅವರು ಗಾಯಗೊಂಡಿರುವ ಬಾಲಕನಿಗೆ ಚಿಕಿತ್ಸೆ ಮುಂದುವರೆಸಿ ಆರೋಗ್ಯ ಸುಧಾರಣೆಗೆ ಹೆಚ್ಚು ನಿಗಾ ವಹಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು.

ಕಳ್ಳೀಪುರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಳೆಯಿಂದ ಹಾನಿಗೊಳಗಾಗಿರುವ ಜನವಸತಿ ಪ್ರದೇಶಗಳನ್ನು ವೀಕ್ಷಿಸಿದರು. ಹೊನ್ನೇಗೌಡನಹಳ್ಳಿ ಮಳೆಯಿಂದ ಹಾನಿಗೊಳಗಾದ ಬಾಳೆ ಬೆಳೆಯನ್ನು ವೀಕ್ಷಿಸಿದರು. ಇದೇ ವೇಳೆ ಸ್ಥಳೀಯ ರೈತರು, ಬೆಳೆಗಾರರು ಜಿಲ್ಲಾಧಿಕಾರಿಯವರಿಗೆ ತಮ್ಮ ಅಹವಾಲು ಸಲ್ಲಿಸಿದರು. ನಮಗೆ ಮಳೆಯಿಂದ ಹೆಚ್ಚು ನಷ್ಟ ಉಂಟಾಗಿದೆ. ಇದಕ್ಕೆ ಸರ್ಕಾರದಿಂದ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕಾವೇರಿ ಅವರು, ಮಳೆ ಗಾಳಿಯಿಂದ ಸಂಭವಿಸಿರುವ ಬೆಳೆ ಹಾನಿಯನ್ನು ತಕ್ಷಣವೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಪ್ರಸ್ತುತ ಉಂಟಾಗಿರುವ ಬೆಳೆಹಾನಿ ಕುರಿತ ವರದಿ ಬಗ್ಗೆ ಪ್ರಸ್ತಾವನೆಯನ್ನು ಶೀಘ್ರವೇ ಕಳುಹಿಸಿ ಪರಿಹಾರ ದೊರಕಿಸಿಕೊಡಲು ಮುಂದಾಗುವುದಾಗಿ ಭರವಸೆ ನೀಡಿದರು. ವಾಸದ ಮನೆಗಳ ಹಾನಿ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಮುಂದಿನ ಪರಿಹಾರ ಕ್ರಮಗಳಿಗೆ ಅಗತ್ಯ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಹಶೀಲ್ದಾರ್ ನಂಜುಂಡಯ್ಯ, ಇತರೆ ಇಲಾಖೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News