ಶಿವಮೊಗ್ಗ, ಶಿಕಾರಿಪುರದಲ್ಲಿ ಬಾಲ್ಯ ವಿವಾಹಗಳಿಗೆ ತಡೆ: ಇಬ್ಬರು ಬಾಲಕಿಯರ ರಕ್ಷಣೆ

Update: 2019-05-08 16:46 GMT

ಶಿವಮೊಗ್ಗ, ಮೇ 8: ಎರಡು ಪ್ರತ್ಯೇಕ ಘಟನೆಗಳಲ್ಲಿ ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳಿಗೆ ತಡೆ ಹಾಕಿದ ಅಧಿಕಾರಿಗಳು, ಇಬ್ಬರು ಬಾಲಕಿಯರನ್ನು ರಕ್ಷಿಸಿದ ಘಟನೆ ನಡೆದಿದೆ. 

ಖಚಿತ ವರ್ತಮಾನದ ಮೇರೆಗೆ ಶಿವಮೊಗ್ಗ ತಾಲೂಕಿನ ಚಿಕ್ಕಮರಡಿ ಹಾಗೂ ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದ ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮದುವೆಗೆ ತಡೆ ಹಾಕಿ, ಬಾಲಕಿಯರನ್ನು ವಶಕ್ಕೆ ಪಡೆದುಕೊಂಡಿದೆ. 

ವಿವರ: ಶಿವಮೊಗ್ಗ ತಾಲೂಕಿನ ಚಿಕ್ಕಮರಡಿ ಗ್ರಾಮದ ಜಯಮ್ಮ ಮತ್ತು ಹಾಲೇಶಪ್ಪ ಎಂಬುವರ ಮಗ ದೇವರಾಜ್ (25) ಹಾಗೂ ಅದೇ ಗ್ರಾಮದ ಚಂದ್ರಮ್ಮ ಮತ್ತು ಅಂಜನಪ್ಪ ಇವರ ಅಪ್ರಾಪ್ತ ಮಗಳೊಂದಿಗೆ ಮದುವೆ ನಿಶ್ಚಯವಾಗಿತ್ತು. 

ಮತ್ತೊಂದು ಪ್ರಕರಣದಲ್ಲಿ, ಶಿಕಾರಿಪುರ ತಾಲೂಕಿನ ಗಾಮ ಗ್ರಾಮದ ಸಂತೋಷ್ (25) ಎಂಬುವವನೊಂದಿಗೆ, ಅದೇ ಗ್ರಾಮದ ಈರಮ್ಮ ಹಾಗೂ ತಿರುಕಪ್ಪ ಎಂಬುವರ ಅಪ್ರಾಪ್ತ ಬಾಲಕಿಯ ವಿವಾಹ ಏರ್ಪಾಡಾಗಿತ್ತು. ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಿಗೆ ಖಚಿತ ಮಾಹಿತಿ ದೊರಕಿತ್ತು. ಮದುವೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಎರಡೂ ವಿವಾಹಗಳನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಕ್ರಮ: ಒಂದು ಪ್ರಕರಣದಲ್ಲಿ ಪೋಷಕರ ಬಳಿ ಅಧಿಕಾರಿಗಳು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬಾಲಕಿಯನ್ನು ಮಕ್ಕಳ ಕಲ್ಯಾನ ಸಮಿತಿ ಆದೇಶದಂತೆ ಸುರಭಿ ಉಜ್ವಲ ಕೇಂದ್ರಕ್ಕೆ ದಾಖಲಿಸಲಾಗಿದೆ. ಬಾಲ್ಯ ವಿವಾಹದ ಕುರಿತು ಅರಿವು ಮೂಡಿಸಲಾಗಿದೆ ಎಂದು ಬುಧವಾರ ಬಿಡುಗಡೆ ಮಾಡಲಾಗಿರುವ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News