ಸಾಲಮನ್ನಾ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ: ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

Update: 2019-05-08 17:02 GMT

ಮೈಸೂರು,ಮೇ.8: ರೈತರ ಸಾಲ ಮನ್ನಾ ಬಗ್ಗೆ ಸರ್ಕಾರ ಸುಳ್ಳು ಹೇಳುತ್ತಿದ್ದು ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ 6 ಲಕ್ಷ ರೈತರನ್ನು ಋಣ ಮುಕ್ತರನ್ನಾಗಿಸಿದೆ ಎಂದು ಸಿಎಂ ಕುಮಾರಸ್ವಾಮಿಯವರು ಬರೆದಿರುವ ಪತ್ರ ಉಲ್ಲೇಖಿಸಿ ಮಾತನಾಡಿದ ಅವರು, ಸಾಲ ಮನ್ನಾ ಯೋಜನೆಯಡಿ ಇದುವರೆಗೆ ಆಗಿರುವ ಪ್ರಯೋಜನ ಎಷ್ಟು? ಎಷ್ಟು ಮೊತ್ತದ ಸಾಲ ಮನ್ನಾ ಮಾಡಿದ್ದಾರೆ ಎಂದು ಸರ್ಕಾರ ಶ್ವೇತ ಪತ್ರ ಹೊರಡಿಸಿ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಹಂತ ಹಂತವಾಗಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಾ ಬಂದಿದ್ದಾರೆ. ಅಲ್ಲದೇ ಖಾಸಗಿ ಸಾಲದಿಂದಲೂ ಋಣ ಮುಕ್ತ ಮಾಡುವುದಾಗಿ ಘೋಷಣೆ ಮಾಡಿದ್ದರು. ಜಾರಿಗೆ ತರುವತ್ತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೇಳಿರುವ ರೈತರ ಸಾಲ ಮನ್ನಾ ನಂಬಿಕಾರ್ಹವಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಬರಗಾಲ ಆರಂಭವಾಗಿದೆ, ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಬರ ಬರುವ ಮುನ್ಸೂಚನೆಯಿದೆ, ಬರ ಎದುರಿಸಲು ಯಾವುದೇ ಪೂರ್ವ ತಯಾರಿಸಿ ನಡೆಸದೆ ರೆಸಾರ್ಟ್, ಪ್ರವಾಸಿ ತಾಣಗಳಲ್ಲಿ ಸಿಎಂ ಸೇರಿದಂತೆ ಹಲವು ಸಚಿವರು ಪಂಚಕರ್ಮ ಚಿಕಿತ್ಸೆ ಹೆಸರಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.

ಗುಜರಾತ್ ರಾಜ್ಯದಲ್ಲಿ ಪೆಪ್ಸಿ ಕಂಪನಿಯು ರೈತರ ಮೇಲೆ ಹಾಕಿರುವ ದೂರಿನ ಬಗ್ಗೆ ಕಿಡಿಕಾರಿದ ಅವರು, ಯಾವುದೇ ಕಂಪನಿಗಳ ದಬ್ಬಾಳಿಕೆಗೆ ರೈತರು ಹೆದರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹುಟ್ಟು ರಾಜ್ಯ ಗುಜರಾತ್ ನಲ್ಲಿ ಪೆಪ್ಸಿ ಕಂಪನಿ ರೈತರ ಮೇಲೆ ಮೊಕದ್ದಮೆ ಹೂಡಿ ಕಿರುಕುಳ ನೀಡಿರುವುದು ಕೃಷಿ ದೇಶಕ್ಕೆ ಮಾಡಿದ ಅಪಮಾನ ಎಂದರು. ಸಾಲಮನ್ನಾ ಬಗ್ಗೆ ಮುಂದಿನ ತಿಂಗಳ ಒಳಗೆ ಸಿಎಂ ಶ್ವೇತ ಪತ್ರ ಹೊರಡಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ದ ರೈತರು ಚಳುವಳಿ ಮಾಡಲಿದ್ದೇವೆ ಎಂದು ಹೇಳಿದರು.

ನಟ ದರ್ಶನ್ ತೂಗುದೀಪ್ ಅವರು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕು ಎನ್ನುವ ಹೇಳಿಕೆಯನ್ನು ತಾವು ಸ್ವಾಗತಿಸುತ್ತೇವೆ, ಆದರೆ ಸಾಲ ಮನ್ನಾದ ಬಗ್ಗೆ ಸಂಘದ ನಿಲುವ ಯಥಾವತ್ತಾಗಿರಲಿದೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಅಶ್ವಥ್ ನಾರಾಯಣ ರಾಜೇ ಅರಸ್, ಹೊಸೂರ್ ಕುಮಾರ್, ಹೊಸಕೋಟೆ ಬಸವರಾಜ್, ನೇತ್ರಾವತಿ, ಮರಂಕಯ್ಯ, ಮಂಡಕಳ್ಳಿ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News